ನ್ಯೂಸ್

ಇ-ಆಸ್ತಿ ನೋಂದಣಿ 6 ತಿಂಗಳು ವಿಸ್ತರಣೆಗೆ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಇ-ಆಸ್ತಿ ನೋಂದಣಿ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಮಾರ್ಚ್ 10ಕ್ಕೆ ನಿಗದಿ ಪಡಿಸಿರುವ ಅವಧಿಯನ್ನು ರಾಜ್ಯ ಸರ್ಕಾರ ಕನಿಷ್ಠ ಆರು ತಿಂಗಳು ಮುಂಡೂಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಒತ್ತಾಯಿಸಿದರು. ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಅಳವಡಿಸಲು ಸರ್ಕಾರ ನಿರ್ದೇಶನ ನೀಡಿದ್ದು, ಅದರ ಪ್ರಕಾರ ಕೆಎಂಡಿಎಸ್ (ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ)ಯಿಂದ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲೇ ಆಸ್ತಿಗಳ ನೋಂದಣಿ ಗಣಕೀಕರಣಗೊಳಿಸಬೇಕು. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಎಂಆರ್‌ಸಿ ತಂತ್ರಾಂಶದಲ್ಲಿ ನಮೂದು ಮಾಡಿದೆ. ಇದು ಅನಧಿಕೃತ ತಂತ್ರಾಂಶವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ನಮೂನೆ-2 ಮತ್ತು 3ನ್ನು ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶಕ್ಕೆ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಇದುವರೆಗೂ ಇ-ಆಸ್ತಿ ಯೋಜನೆ ಅಡಿಯಲ್ಲಿ ಪಡೆದ ನಮೂನೆ 2, 3 ವ್ಯರ್ಥವಾಗಿದೆ. ಆಯುಕ್ತರೂ ಸೇರಿ ಕಂದಾಯ ಇಲಾಖೆಯ ಅಧಿಕಾರಿ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಪಾಲಿಕೆ ಆಡಳಿತಕ್ಕೆ ದೊಡ್ಡ ಸರ್ಜರಿ ಅವಶ್ಯಕತೆ ಇದೆ ಎಂದರು. ಇ-ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಈಗಾಗಲೇ ಸಾರ್ವಜನಿಕ ಸಭೆ, ಅಧಿಕಾರಿಗಳ ಸಭೆ ಆಗಿದೆ. ಇ-ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳೆಲ್ಲವೂ ಬೇಕಿಲ್ಲ. ಆದರೆ ಪಾಲಿಕೆಯವರು ವಿನಾಕಾರಣ ಸಾರ್ವಜನಿಕರಿಗೆ ಬೇಡವಾದ ದಾಖಲೆ ತರಲು ಹೇಳುತ್ತಿದ್ದಾರೆ. ಶಿವಮೊಗ್ಗದಲ್ಲಿ 1.7ಲಕ್ಷ ಖಾತೆದಾರರಿದ್ದು ಅದರಲ್ಲಿ ಶೇ.30ರಷ್ಟು ಖಾತೆಗಳು ಇ-ಆಸ್ತಿ ಪಡೆದಿಲ್ಲ ಎಂದರು. ಈಗ ಉಳಿದಿರುವ ಸುಮಾರು ಶೇ.65ರಷ್ಟು ಡಿಜಿಟಲಿಕರಣ ಕಾಮಗಾರಿಗೆ ಮಾ.10ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ಇದು ಅಸಾಧ್ಯ. ಶೇ.35ರಷ್ಟು ಪ್ರಗತಿ ಕಾಣಲು 6 ವರ್ಷತೆಗೆದುಕೊಂಡಿರುವ ಅಧಿಕಾರಿಗಳು ಶೇ.65ರಷ್ಟು ಪ್ರಗತಿಯನ್ನು ಒಂದು ತಿಂಗಳಲ್ಲಿ ಮುಗಿಸುತ್ತಾರೆಯೇ ಎಂದು ಪ್ರಶ್ನಿಸಿದರು. ಒಕ್ಕೂಟದ ಅಧ್ಯಕ್ಷ ಎಸ್.ಆರ್. ಗೋಪಾಲ್, ಪ್ರಮುಖರಾದ ಎಸ್.ಬಿ.ಅಶೋಕ್‌ಕುಮಾರ, ಸೀತಾರಾಮ್, ಎಸ್.ಎಸ್.ಜ್ಯೋತಿಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.

ಇ-ಸ್ವತ್ತು ಎನ್ನುವುದು ಸಹಜ ಪ್ರಕ್ರಿಯೆ. ಪಾಲಿಕೆಯವರು ಅದನ್ನು ಮನೆ ಬಾಗಿಲಿಗೆ ಬಂದು ಕೊಡಬೇಕು. ಆದರೆ ಅನಧಿಕೃತ ತಂತ್ರಾಂಶಗಳ ಮೂಲಕ ನೋಂದಣಿ ಮಾಡಿ ಆಸ್ತಿದಾರರಿಗೆ ತೊಂದರೆ ಉಂಟಾಗಿದೆ. ಸಾರ್ವಜನಿಕರು ಈ ಬಗ್ಗೆ ಗೊಂದಲಕ್ಕೆ ಒಳಗಾಗದೆ ಯಾವ ಲಂಚವನ್ನೂ ನೀಡದೆ 100ರೂ. ಕೊಟ್ಟು ತಮ್ಮ ಖಾತೆ ಪಡೆದುಕೊಳ್ಳಬಹುದು. -ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಒಕ್ಕೂಟದ ಸಂಘಟನಾ ಕಾರ್ಯದರ್ಶಿ