ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧದ ನಕಲಿ ವೋಟರ್ ಐಡಿ ಪತ್ತೆ ಪ್ರಕರಣದ ತನಿಖೆ ಸಂಬಂಧ ಹೈಕೋರ್ಟ್‌ನ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸೆಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಪಿ.ಎಂ.ಮುನಿರಾಜುಗೌಡ ಅವರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ.
ಶನಿವಾರ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಭೇಟಿಯಾಗಿ ದೂರು ನೀಡಿದ ಮುನಿರಾಜುಗೌಡ ಅವರು ದೂರಿನ ಜತೆಗೆ ಕೆಲವು ದಾಖಲೆಗಳನ್ನು ನೀಡಿದರು.
ನಕಲಿ ವೋಟರ್ ಐಟಿ ಹಗರಣ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ೨೦೧೮ರಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಅಪರಾಧ ಸಂಖ್ಯೆ ೫೫ರ ಪ್ರಕರಣದ ಕಡತವು ೪೨ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇದಕ್ಕೆ ಜೋಡಣೆಯಾಗಿರುವ ಅಪರಾಧ ಸಂಖ್ಯೆ ೫೪ರ ಪ್ರಕರಣದ ಕಡತವನ್ನು ಜಾಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ಗಳು ಮತ್ತು ಪೂರ್ವ ವಿಭಾಗದ ಡಿಸಿಪಿಗಳು ಸೇರಿಕೊಂಡು ಮುನಿರತ್ನ ಅವರನ್ನು ಬಂಧನದಿಂದ ಪಾರು ಮಾಡಲು ನ್ಯಾಯಾಲಯವನ್ನು ಯಾಮಾರಿಸಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅಪರಾಧ ಸಂಖ್ಯೆ ೫೪ರ ಪ್ರಕರಣದ ಕಡತವನ್ನು ವಿಚಾರಣಾಧಿಕಾರದ ವ್ಯಾಪ್ತಿಯೇ ಇರದ ೮ನೇ ಎಸಿಎಂಎಂ ನ್ಯಾಯಾಲಯದಲ್ಲಿ ಉಳಿಸಿದ್ದಾರೆ.