ಬೆಂಗಳೂರು: ಅಪರಿಚಿತ ಲಾರಿ ಹರಿದು ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಮಂಗಳವಾರ ರಾತ್ರಿ ಗುಂಜೂರು ಮುಖ್ಯರಸ್ತೆಯಲ್ಲಿ ಸಂಭವಿಸಿದೆ.
ಹೊಸಕೋಟೆ ನಿವಾಸಿ ನಿಯಾಮ್(೨೪) ಮೃತ ಫುಡ್ ಡೆಲಿವರಿ ಬಾಯ್. ಅಸ್ಸಾಂ ಮೂಲದ ನಿಯಾಮ್ ಆರು ತಿಂಗಳ ಹಿಂದೆ ನಗರಕ್ಕೆ ಬಂದು ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ೯.೧೫ರ ಸುಮಾರಿಗೆ ಫುಡ್ ಡೆಲಿವರಿ ನೀಡಲು ದ್ವಿಚಕ್ರ ವಾಹನದಲ್ಲಿ ಗುಂಜೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ. ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸವಾರ ನಿಯಾಮ್ ತಲೆ ಮೇಲೆಯೇ ಲಾರಿ ಚಕ್ರಗಳು ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತ ಎಸೆಗಿದ ಲಾರಿ ಚಾಲಕ ಘಟನೆ ಬಳಿಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಲಾರಿ ಹಾಗೂ ಅದರ ಚಾಲಕನ ಪತ್ತೆಗೆ ಶೋಧಿಸಲಾಗುತ್ತಿದೆ. ಈ ಸಂಬಂಧ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.