ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸೆ.30 ರೊಳಗೆ ತೀರ್ಪು ನೀಡುವಂತೆ ವಿಚಾರಣೆ ನಡೆಸುತ್ತಿರುವ ಲಖನೌದ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಅಡ್ವಾಣಿ, ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ, ಉಮಾಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಭರಾ ಸೇರಿ 32 ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರಕುಮಾರ್ ಯಾದವ್ ವರದಿಯನ್ನು ಓದಿದ ಬಳಿಕ ವಿಚಾರಣೆ ಕೊನೆಯ ಹಂತದಲ್ಲಿರುವುದು ತಿಳಿದುಬರುತ್ತದೆ. ಈ ಕಾರಣಕ್ಕಾಗಿ ಇನ್ನೊಂದು ತಿಂಗಳು ಕಾಲಾವಕಾಶ ನೀಡಲಾಗುತ್ತಿದೆ. ಅಂದರೆ, ಸೆ.30ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಕೋರ್ಟ್ ಈ ಮೊದಲು ಆಗಸ್ಟ್ 31ರ ಗಡುವು ವಿಧಿಸಿತ್ತು.
ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಕರಸೇವಕರು ಧ್ವಂಸಗೊಳಿಸಿದ್ದರು. ಮಸೀದಿ ಇದ್ದ ಜಾಗದಲ್ಲಿ ಭವ್ಯ ರಾಮಮಂದಿರವಿತ್ತು. ಅಲ್ಲಿ ಮತ್ತೆ ರಾಮಮಂದಿನ ನಿರ್ಮಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಕರ ಸೇವಕರ ಹೋರಾಟಕ್ಕೆ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಈ ಹೋರಾಟದ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ; ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್ನೊಂದಿಗೆ ನೇರ ಸಂಪರ್ಕ
ಕಳೆದ ತಿಂಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆ ದಾಖಲಿಸಿದ್ದ ಅಡ್ವಾಣಿ, ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಎಲ್ಲ ಆರೋಪಿಗಳು ಹಾಗೂ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವ ಕೋರ್ಟ್ ತೀರ್ಪು ನೀಡುವುದೊಂದೇ ಬಾಕಿಯಿದೆ. ಹೀಗಾಗಿ ಇವರೆಲ್ಲರ ಭವಿಷ್ಯ ಏನಾಗುತ್ತೆ ಎಂಬ ಕುತೂಹಲ ಎದುರಾಗಿದೆ.