ಸರಗೂರು ತಾಲೂಕಿನ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಧರಣೇಶ್, ಚಲುವರಾಜು, ದೇವರಾಜು, ರವಿ, ದೇವದಾಸ್ ಇತರರು ಪಾಲ್ಗೊಂಡಿದ್ದರು.  
ನ್ಯೂಸ್

ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ

ತಾಲೂಕು ಸಮಿತಿ ಅಧ್ಯಕ್ಷ ಚನ್ನೀಪುರ ಚೆಲುವರಾಜು ಸೂಚನೆ

ಸರಗೂರು : ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು, ಸಂಬಂಧಿಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚನ್ನೀಪುರ ಚೆಲುವರಾಜು ಹೇಳಿದರು.

ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ತಾಲೂಕಿನ ಹಲವು ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಸೋಮವಾರದಿಂದ ಶನಿವಾರದವರಿಗೆ ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಭಾನುವಾರ ಬಸ್ ಸೇವೆ ಸ್ಥಗಿತಗೊಳಿಸಿದ್ದಾರೆ. ಶಾಲೆಯ ಮಕ್ಕಳು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ ಸಣ್ಣ ಮಕ್ಕಳಿಗೆ ಅರ್ಧ ಪ್ರಯಾಣ ದರ ತೆಗೆದುಕೊಳ್ಳಬೇಕು. ಆದರೆ ಬಸ್ ನಿರ್ವಾಹಕರು ವಯಸ್ಕರಿಗೆ ತೆಗೆದುಕೊಳ್ಳುವ ದರ ಪಡೆಯುತ್ತಿದ್ದಾರೆ. ಕೂಡಲೇ ಈ ಬಗ್ಗೆ ನಿಮ್ಮ ನಿಗಮದ ಸಿಬ್ಬಂದಿಗೆ ತಿಳಿವಳಿಕೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಗ್ರಾಮಗಳಿಂದ ಹೆಂಗಸರು ಹಾಗೂ ಮಕ್ಕಳು ನಡೆದುಕೊಂಡು ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತಾರೆ. ಆದರೆ ಮಹಿಳೆಯರನ್ನು ಕಂಡ ತಕ್ಷಣ ಚಾಲಕರು ಬಸ್ ಖಾಲಿ ಇದ್ದರೂ ನಿಲ್ಲಿಸದೇ ಹೋಗುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಚನ್ನೀಪುರ ಚೆಲುವರಾಜು ಈ ಬಗ್ಗೆ ಗಮನಿಸುವುದಾಗಿ ಭರವಸೆ ನೀಡಿದರು.

ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ಡಿಬಿಟಿ ಹಣ ಸಂದಾಯವಾಗುತ್ತಿದೆ. ಇ-ಕೆವೈಸಿ ಮಾಡಿಸದವರಿಗೆ ಹಣ ಬಂದಿಲ್ಲ. ಕೆಲ ನ್ಯಾಯಬೆಲೆ ಅಂಗಡಿ ಉಸ್ತುವಾರಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯರು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಸುಮಾರು ಬಾಕಿ ಉಳಿದಿವೆ ಎಂದು ಸಿಡಿಪಿಒ ಸಿಬ್ಬಂದಿಗೆ ತಿಳಿಸಿದರು. ಮುಂದಿನ ಸಭೆಯೊಳಗೆ ಎಲ್ಲ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಯೋಜನೆ ಲಾಭ ತಲುಪಿಸಬೇಕು ಎಂದು ಸಮಿತಿ ಅಧ್ಯಕ್ಷ ಚೆಲುವರಾಜು ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರಣೇಶ್, ಮಹೇಂದ್ರ ಚನ್ನಗುಂಡಿ, ಮಂಜುನಾಥ ಕಾಳಿಹುಂಡಿ, ಶಿವರಾಜು , ಭಾಗ್ಯಲಕ್ಷ್ಮೀ, ಭಾಗ್ಯಾ ಕೆಂಪಸಿದ್ದ, ಮಹದೇವು, ಬಿ.ಸಿ. ಮಹೇಶ್, ರವಿ, ದೇವರಾಜು, ಚಿಕ್ಕಣ್ಣ, ಮಾದೇಗೌಡ, ಈರನಾಯಕ , ಮಹಮದ್ ಶೊಯೇಬ್, ದೇವದಾಸ್, ನರೇಗ ಸಂಯೋಜಕ ಅಧಿಕಾರಿ ಮಹದೇವಸ್ವಾಮಿ, ಸದಾಶಿವಯ್ಯ ಹಾಜರಿದ್ದರು.