ಬೆಂಗಳೂರು: ಮಧ್ಯವರ್ತಿಗಳೇ ಇಲ್ಲದ ನಮ್ಮ ಗ್ಯಾರಂಟಿಗಳನ್ನು ಮನೆ ಮನೆ ತಲುಪಿಸಿ(Deliver guarantees door to door without intermediaries) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆ ಮಾಡಿ ಮಾತನಾಡಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಮೊದಲ ಬಾರಿ ಸಿಎಂ ಆಗಿ ಹಲವಾರು ಭಾಗ್ಯಗಳು, ಈ ಬಾರಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿ ಆಹಾರ, ಶಿಕ್ಷಣ, ಮಾಹಿತಿ ಹಕ್ಕುಗಳನ್ನು ಮಾಡುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಜನರ ಹಕ್ಕುಗಳನ್ನಾಗಿ ಮಾಡಿದರು. ಇವೆಲ್ಲವೂ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ಉದ್ದೇಶವನ್ನೇ ಹೊಂದಿವೆ. ಆದ್ದರಿಂದ ಎರಡು ಹೊತ್ತಿನ ಊಟಕ್ಕೂ ಶ್ರಮಿಸುತ್ತಿರುವ ಕಟ್ಟ ಕಡೆಯ ಜನರ ಪರವಾಗಿ ನಿಮ್ಮ ಬದ್ಧತೆ ತೋರಿಸಿ ಎಂದು ಸೂಚಿಸಿದರು.
ಅಂಬೇಡ್ಕರ್ ಅವರಿಂದ ಬುದ್ದ, ಬಸವ, ಗಾಂಧಿ ಎಲ್ಲರೂ ಸಮಾಜದ ಸಮಾನತೆ, ತಾರತಮ್ಯದ ಸಮಾಜದ ಬದಲಾವಣೆಗಾಗಿ ಶ್ರಮಿಸಿದರು. ಆದರೂ ಇನ್ನೂ ಅಸಮಾನತೆ ಹೋಗಿಲ್ಲ ಎಂದರೆ ಎಲ್ಲರಿಗೂ ಸಮಾನ ಅವಕಾಶ ಸಿಗದೇ ಇರುವುದೇ ಮುಖ್ಯ ಕಾರಣ. ಆದ್ದರಿಂದ ಸಮಾಜದಲ್ಲಿ ಪಟ್ಟಭದ್ರರು ಇನ್ನೂ ಹೆಚ್ಚಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾಡಿರುವ ಭಾಷಣವನ್ನು ನೀವೆಲ್ಲ ಓದಬೇಕು. ಐತಿಹಾಸಿಕ ಕಾರಣಗಳಿಂದಾಗಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕು ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಈ ಆಶಯ ಈಡೇರಿಸಲು ನಾವು ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
ಸೂಟು ಬೂಟು ಹಾಕಿಕೊಂಡು ಬರುವವರನ್ನು ಕುರ್ಚಿಯಲ್ಲಿ ಕೂರಿಸಿ ಮಾತನಾಡಿಸುವುದನ್ನು, ಮಾಸಲು ಬಟ್ಟೆಯಲ್ಲಿ ಬರುವ ಬಡವರನ್ನು ನಿರ್ಲಕ್ಷ್ಯದಿಂದ ಕಾಣುವುದು ನಮ್ಮ ಮಾನಸಿಕ ಗುಲಾಮಗಿರಿಯ ಧ್ಯೋತಕ. ಇದನ್ನು ಕಿತ್ತೊಗೆದು ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅವಕಾಶಗಳು ಸಿಗುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.
ಕೆಎಎಸ್ ಅಧಿಕಾರಿಗಳ ಸಂಘ ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಎಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಗುಣಾತ್ಮಕ ಕರ್ತವ್ಯ, ಸೇವೆ ಮುಖ್ಯ ಎಂದರು.
ಕೆಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ. ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸತ್ಯವತಿ ಉಪಸ್ಥಿತರಿದ್ದರು.