ಕಡೂರು: ತಾಲೂಕಿನ ಜಿಪಂ ಅಧೀನದಲ್ಲಿರುವ ಇಲಾಖೆ ಕಾರ್ಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಅರ್ಹ ಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಬಿ.ಎಂ.ರವೀಂದ್ರ ಕುಮಾರ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಬರುವ ಯೋಜನೆಗಳು ಹೆಚ್ಚು ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಕಾಮಗಾರಿಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಅಧಿಕಾರಿಗಳು ಕ್ರಮವಹಿಸಬೇಕಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಸಸಿಗಳನ್ನು ನೀಡಿ, ರಸ್ತೆಗಳ ಬದಿ ನೆಡುತೋಪು ನಿರ್ಮಾಣಕ್ಕೆ ಸಸಿಗಳನ್ನು ನೀಡಬೇಕಿದೆ ಇದರ ನಿರ್ವಹಣೆಗೆ ಒತ್ತು ನೀಡಬೇಕು ಸಸಿಗಳನ್ನು ಸರಕಾರಿ ಕಚೇರಿ, ಶಾಲಾ ಕಾಲೇಜು ಆವರಣಗಳಲ್ಲಿ ಸಂಘ,ಸಂಸ್ಥೆಗಳಿಗೆ ನೀಡಲು ಆದ್ಯತೆ ನೀಡಬೇಕು ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಾಲ ಕಾಲಕ್ಕೆ ಇಲಾಖೆಯಿಂದ ಬರುವ ಮಾಹಿತಿ ನೀಡಬೇಕು. ಜತೆಗೆ ಎಲ್ಲಿಯೂ ಬಿತ್ತನೆ ಬೀಜದ ಕೊರತೆಯಾಗದ ರೀತಿಯಲ್ಲಿ ನೋಡಿಕೊಳ್ಳ ಬೇಕು. ಸಮರ್ಪಕ ಗೊಬ್ಬರದ ದಾಸ್ತಾನು ಮಾಡಬೇಕು. ತಾಲೂಕಿನಲ್ಲಿ ಜುಲೈವರೆಗೆ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿರುವ ಮಾಹಿತಿ ಇದೆ. ಅಧಿಕಾರಿಗಳು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳೆಗಳ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಜಿಪಂ ಇಂಜಿನಿಯರ್ ವಿಭಾಗದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರ್‌ಗಳ ಕೊರತೆ ಇದೆ. ನಾನು ಕೂಡ 20ದಿನಗಳ ನಂತರ ನಿವೃತ್ತಿಯಾಗುತ್ತಿರುವುದಾಗಿ ಆಡಳಿತಾಧಿಕಾರಿ ಗಮನಕ್ಕೆ ತಂದರು.
ತಾಪಂ ಇಒ ಸಿ.ಆರ್.ಪ್ರವೀಣ್, ವ್ಯವಸ್ಥಾಪಕ ವಿಜಯ ಕುಮಾರ್ ಇದ್ದರು.