ನ್ಯೂಸ್

ಕರೊನಾ ಲಾಕ್​ಡೌನ್​ ಇನ್ನೇನೆಲ್ಲಾ ಮಾಡಿಸಲಿದೆ? ತರಕಾರಿ ವ್ಯಾಪಾರಕ್ಕೂ ಶುರುವಾಯ್ತು ನೋಡಿ ಹೊಸ ಪದ್ಧತಿ!

ನವದೆಹಲಿ: ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ, ಸಮ- ಬೆಸ ಸಂಖ್ಯೆಯ ನಂಬರ್‌ ಪ್ಲೇಟ್‌ ಹೊಂದಿರುವ ಗಾಡಿಗಳನ್ನು ಮಾತ್ರ ರಸ್ತೆಗಿಳಿಸಿರುವ ಪದ್ಧತಿ ಶುರುವಾಗಿ ಭಾರಿ ಪ್ರಚಾರ ಪಡೆದಿತ್ತು ದೆಹಲಿ. ಇದೀಗ ಅದೇ ಮಾದರಿಯನ್ನು ಹಣ್ಣು-ತರಕಾರಿ ಮಂಡಿಗಳಿಗೂ ಅನ್ವಯಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದೇಶ ಹೊರಡಿಸಿದ್ದಾರೆ.

ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಪ್ರತಿಯೊಂದು ಮಂಡಿಗೂ ಒಂದೊಂದು ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆ ಸಮ ಸಂಖ್ಯೆಯಾಗಿದ್ದರೆ ಅವರು ಒಂದು ದಿನ ಹಾಗೂ ಬೆಸ ಸಂಖ್ಯೆಯವರು ಮತ್ತೊಂದು ದಿನ... ಈ ರೀತಿಯಲ್ಲಿ ವ್ಯಾಪಾರ ನಡೆಸಬೇಕು. ಅಂದರೆ ಪ್ರತಿಯೊಬ್ಬರಿಗೂ ದಿನ ಬಿಟ್ಟು ದಿನ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಎಲ್ಲರಿಗೂ ಒಂದೇ ಸಮಯದಲ್ಲಿ ಹಣ್ಣು- ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಮಂಡಿಯಲ್ಲಿ ಜನಜಂಗುಳಿ ಹೆಚ್ಚಾಗಿ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಈ ರೀತಿಯ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಬೇಕು ಎಂದಿರುವ ಮುಖ್ಯಮಂತ್ರಿ, ಈ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಪೊಲೀಸರ ಕಣ್ಗಾವಲು ಇಡಲಾಗಿದೆ ಎಂದಿದ್ದಾರೆ.

ತರಕಾರಿಯನ್ನು ಬೆಳಗ್ಗೆ 6 ರಿಂದ 11 ಮತ್ತು ಹಣ್ಣುಗಳನ್ನು ಮಧ್ಯಾಹ್ನ 2ರಿಂದ ಸಂಜೆ 6 ರವರೆಗೆ ಮಾರಲು ಅವಕಾಶ ಕಲ್ಪಿಸಲಾಗಿದೆ. ಆದಾದ್‌ಪುರ, ಘಾಜಿಯಾಪುರ ಹಾಗೂ ಓಖ್ಲಾ ಮಂಡಿಗಳು ಹೋಲ್‌ಸೇಲ್‌ ಮಾರುಕಟ್ಟೆಯಾಗಿದ್ದು, ಅವುಗಳಿಗೆ ಈ ನಿಯಮ ಅನ್ವಯ ಆಗಲಿದೆ. ಯಾವುದೇ ಕಾರಣಕ್ಕೂ ನಿಯಮ ಮೀರಬಾರದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

ಇಲ್ಲಿ ಲಾಕ್‌ಡೌನ್‌ ಏಪ್ರಿಲ್‌ 30ರವರೆಗೂ ಮುಂದುವರೆಸುವ ಚಿಂತನೆ ನಡೆಸಲಾಗಿದ್ದು, ಇದುವರೆಗೆ ಅಧಿಕೃತವಾಗಿ ಘೋಷಣೆ ಹೊರಬಂದಿಲ್ಲ.

ದೆಹಲಿಯಲ್ಲಿ ಇಲ್ಲಿಯವರೆಗೆ, 1,154 ಮಂದಿ ಕರೊನಾ ಸೋಂಕಿತರು ಪತ್ತೆಯಾಗಿದ್ದು, 24 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 746 ಮಂದಿ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ತಬ್ಲಿಘಿಗಳು. (ಏಜೆನ್ಸೀಸ್‌)