ಬೆಂಗಳೂರು: “ನೀರಾವರಿ ಯೋಜನೆಗಳ ವಿಚಾರವಾಗಿ ದೆಹಲಿ ಪ್ರವಾಸ ಬಹುತೇಕ ಫಲಪ್ರದವಾಗಿದ್ದು, ಎತ್ತಿನಹೊಳೆ ಯೋಜನೆ ಸಂಬಂಧ ನಮ್ಮ ಮನವಿಯನ್ನು ಪುರಸ್ಕರಿಸುವುದಾಗಿ ಸಚಿವರು ಅಸ್ತು ಎಂದಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: 1 ಸಿನಿಮಾ, 150 ಕಟ್ಸ್! ಭಾರೀ ವಿವಾದದಲ್ಲಿ ‘ಉದಯಪುರ್ ಫೈಲ್ಸ್’, ರಿಲೀಸ್ ನಿರ್ಧಾರ ಕೇಂದ್ರದ ಕೈಯಲ್ಲಿ | Udaipur Files
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ದೆಹಲಿ ಪ್ರವಾಸದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಅವರನ್ನು ಭೇಟಿಯಾಗಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸಂಬಂಧ ಅಧಿಸೂಚನೆ ಹೊರಡಿಸುವುದು, ಮೇಕೆದಾಟು ಯೋಜನೆ ಅಪ್ರೈಸಲ್ ವರದಿ ಬಗ್ಗೆ ಚರ್ಚಿಸಲಾಯಿತು. ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ರನ್ನು ಕೂಡ ಭೇಟಿ ಮಾಡಿ ಕಳಸಾ ಬಂಡೂರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ" ಎಂದರು.
"ಈ ವಿಚಾರವಾಗಿ ಪ್ರಹ್ಲಾದ್ ಜೋಷಿ ಅವರ ಜತೆಗೂ ಮಾತನಾಡಿದ್ದೇನೆ. ಎರಡು ರಾಜ್ಯಗಳ ನಡುವೆ ರಾಜಿಗೆ ಸಲಹೆ ನೀಡಿದ್ದಾರೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಕೆಲವು ತಾಂತ್ರಿಕ ಅಂಶಗಳಿವೆ. ಗೋವಾದವರು ನಮಗೆ ಶೋಕಾಸ್ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ” ಎಂದರು.
“ಇದರೊಂದಿಗೆ ಹೊಸ ಯೋಜನೆಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ದೆಹಲಿಗೆ ಹೋಗಿ, ರಾಜ್ಯದ ಸಂಸದರ ಜೊತೆ ಚರ್ಚೆ ನಡೆಸಿ ಒಟ್ಟಾಗಿ ಒತ್ತಾಯ ಹೇರಲು ಮನವಿ ಮಾಡಲಾಗುವುದು ಎಂದಿದ್ದಾರೆ. ಇನ್ನು ಎತ್ತಿನಹೊಳೆ ಯೋಜನೆ ಸಂಬಂಧ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ, “ನೀವು ರಸ್ತೆ, ಅಣೆಕಟ್ಟು ಸೇರಿದಂತೆ ಯಾವುದೇ ಯೋಜನೆ ಮಾಡಬೇಕಾದರೂ ವಿರೋಧ ವ್ಯಕ್ತವಾಗುತ್ತದೆ. ಕುಡಿಯುವ ನೀರು ಪೂರೈಸಲೇಬೇಕು. ಈ ನೀರನ್ನು ಎಲ್ಲಾದರೂ ಸಂಗ್ರಹ ಮಾಡಿಕೊಳ್ಳಬೇಕು. ಲಕ್ಕೇನಹಳ್ಳಿ ಮಾತ್ರವಷ್ಟೇ ಅಲ್ಲ, ಕೊರಟಗೆರೆ ಭಾಗದಲ್ಲಿ ಕೆಲವು ಪ್ರದೇಶ ಬಳಸಿಕೊಳ್ಳಬೇಕು ಎಂದು ಆಲೋಚಿಸಿದ್ದೆವು. ನೀರು ಹೇಗೆ ಹರಿಯುತ್ತದೆ ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಪರಮೇಶ್ವರ್ ಅವರ ಜತೆ ಚರ್ಚಿಸಿ, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮನಗೂಳಿ ಬ್ಯಾಂಕ್ ಕಳ್ಳತನ ಪ್ರಕರಣ, ಮತ್ತೆ 12 ಜನರ ಬಂಧನ, ಒಟ್ಟು 39 ಕೆಜಿ ಬಂಗಾರ- 1.16 ಕೋಟಿ ನಗದು ವಶಕ್ಕೆ
ಹೈಕಮಾಂಡ್ ಭೇಟಿಯಾಗಿ ಯಾವೆಲ್ಲಾ ರಾಜಕೀಯ ಚರ್ಚೆ ನಡೆಯಿತು ಎಂಬ ಪ್ರಶ್ನೆಗೆ, “ಯಾವ ರಾಜಕೀಯ ಚರ್ಚೆಯಾಗಿದೆ? ನಮ್ಮ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಮಾತ್ರ ಚರ್ಚಿಸಿದ್ದೇವೆ. ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ. ಇದು ಅಂತಿಮ ಹಂತಕ್ಕೆ ಬಂದಿದೆ. ಇದರ ಪ್ರಸ್ತಾವನೆಯನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು” ಎಂದರು.