ನ್ಯೂಸ್

ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಮಾತನಾಡಿರುವ ವಿಡಿಯೋ ಕ್ಲಿಪ್​ ಕೇಳಿದ ದೆಹಲಿ ಹೈಕೋರ್ಟ್​

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್​, ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಅವರು ಮಾತನಾಡಿರುವ ದ್ವೇಷ ಭಾಷಣದ ವಿಡಿಯೋ ಸಲ್ಲಿಸುವಂತೆ ಸೂಚಿಸಿದೆ.

ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣ ಕುರಿತು ನಿವೃತ್ತ ಅಧಿಕಾರಿ ಹರ್ಷ ಮಾಂಡರ್​ ಎಂಬುವವರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಭಾಷಣದ ವಿಡಿಯೋ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತು.

ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಸಾಲಿಟರ್​ ಜನರಲ್​ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಮುರಳೀಧರ್ ನಿಮಗೆ ಗಲಭೆ ನಡೆದಿರುವುದು ತುರ್ತು ಎನಿಸುವುದಿಲ್ಲವೆ. ಅಪರಾಧಿಗಳ ವಿರುದ್ಧ ಎಫ್​ಐಆರ್​ ದಾಖಲಿಸುವುದು ತುರ್ತು ಅಲ್ಲವೆ ಎಂದು ಅವರನ್ನು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲ ರಾಹುಲ್ ಮೆಹ್ರಾ, ಗಲಭೆ ನಡೆಯುವುದಕ್ಕೆ ಮುಂಚೆ ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಅವರು ಹೇಳಿರುವ ಉದ್ರೇಕಕಾರಿ ಹೇಳಿಕೆಯನ್ನು ಕೋರ್ಟ್​ ಗಮನಕ್ಕೆ ತಂದರು.

ವಿಚಾರಣೆಯಲ್ಲಿ ಇದ್ದ ಪೊಲೀಸರು ಆ ಹೇಳಿಕೆ ನೀಡಿರುವುದು ಕಪಿಲ್ ಮಿಶ್ರಾ ಅಲ್ಲ ಎಂದು ತಿಳಿಸಿದರು. ಈ ಹೇಳಿಕೆಗೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ದೆಹಲಿ ಪೊಲೀಸರ ನಡತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್​)