ನ್ಯೂಸ್

ಈಶಾನ್ಯ ದೆಹಲಿ ಹಿಂಸಾಚಾರ; ಆಪ್​ ಮುಖಂಡ ತಾಹೀರ್​ ಹುಸ್ಸೇನ್​ ವಿರುದ್ಧ ಎಫ್​ಐಆರ್​, ಕಾರ್ಖಾನೆಗೆ ಬೀಗ ಜಡಿದ ಪೊಲೀಸರು

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಆಪ್​ ಮುಖಂಡ, ಪಾಲಿಕೆ ಸದಸ್ಯ ತಾಹೀರ್​ ಹುಸ್ಸೇನ್​ ಅವರ ಮೇಲೆ 302 ಸೆಕ್ಷನ್​ನಡಿ ಎಫ್​ಐಆರ್​ ದಾಖಲಾಗಿದೆ.

ತಾಹೀರ್​ ಮೇಲೆ ದಯಾಳ್​ಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ, ಖಜೂರಿ ಖಾಸ್​ ಪ್ರದೇಶದಲ್ಲಿರುವ ಅವರ ಕಾರ್ಖಾನೆಗೆ ಪೊಲೀಸರು ಬೀಗ ಮುದ್ರೆ ಜಡಿದಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್​ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್​ ಶರ್ಮಾ ಆರೋಪಿಸಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಆಪ್​ ಕೌನ್ಸಿಲರ್​ ತಾಹೀರ್​ ಅವರ ಮನೆಯ ಟೆರೇಸ್​ನಲ್ಲಿ ಪೆಟ್ರೋಲ್​ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿದ್ದವು.

ಆದರೆ ತಾಹೀರ್​ ಹುಸ್ಸೇನ್, ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ. ನಮ್ಮ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಮನೆಯಿಂದ ನೂಕಿದ್ದರು ಎಂದಿದ್ದರು. (ಏಜೆನ್ಸೀಸ್​)