ನ್ಯೂಸ್

ಪರೀಕ್ಷಾ ಕೊಠಡಿಯೊಳಗೆ ಶಿಕ್ಷಕನಿಗೆ ಚಾಕು ಇರಿದ ವಿದ್ಯಾರ್ಥಿ!

ನವದೆಹಲಿ: ಅದೊಂದು ಕಾಲವಿತ್ತು. ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಭಯ. ತರಗತಿಯಲ್ಲಿ ಶಿಕ್ಷಕರ ಎದುರು ಎದ್ದು ನಿಂತು ಮಾತನಾಡಲೂ ಧ್ವನಿ ಹೊರಬರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಕರೆಂದರೆ ಸ್ವಲ್ಪವೂ ಭಯವಿಲ್ಲ. ಗುರು ಎಂಬ ಭಾವನೆ ಇಲ್ಲದ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚು ವರದಿಯಾಗುತ್ತಿವೆ.

ಇದೀಗ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೊಠಡಿಯೊಳಗೆ ಶಿಕ್ಷಕನಿಗೆ ಚಾಕು ಇರಿದಿದ್ದಾನೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಇಂದರ್‌ಪುರಿ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಇಂದು ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೂಡಲೇ ಶಿಕ್ಷಕನನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ.

ಸರ್ಕಾರಿ ಶಾಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದಾಗ, ಶಿಕ್ಷಕ ತರಗತಿಯೊಳಗೆ ಬಂದಿದ್ದಾನೆ. ಈ ವೇಳೆ
ವಿದ್ಯಾರ್ಥಿಯೊಬ್ಬನೊಂದಿಗೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಾದ ವಿದ್ಯಾರ್ಥಿ ತನ್ನಲ್ಲಿದ್ದ ಚಾಕು ತೆಗೆದು ಶಿಕ್ಷಕನಿಗೆ ಹಲವು ಬಾರಿ ಇರಿದಿದ್ದಾನೆ. ಭೂದೇವ್ ವಿದ್ಯಾರ್ಥಿಯಿಂದ ಚಾಕು ಇರಿತಕ್ಕೆ ಒಳಗಾದ ಶಿಕ್ಷಕ.

ಸದ್ಯ ದೆಹಲಿಯ ಬಿಎಲ್​ಕೆ ಕಪೂರ್ ಆಸ್ಪತ್ರೆಯಲ್ಲಿ ಶಿಕ್ಷಕ ಭೂದೇವ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 12 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದಾರೆ. ಸದ್ಯ ಚಾಕು ಇರಿತ ಪ್ರಕರಣದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ವಿದ್ಯಾರ್ಥಿಗಳ ವಿಚಾರಣೆಯಿಂದ ಶಿಕ್ಷಕನಿಗೆ ಯಾಕಾಗಿ ಚಾಕು ಇರಿಯಲಾಗಿದೆ ಎಂಬುದು ಬಹಿರಂಗವಾಗಬೇಕಿದೆ. (ಏಜೆನ್ಸೀಸ್)