ನ್ಯೂಸ್

ಜನನಿಬಿಡ ಏರ್​ಪೋರ್ಟ್ ಜಗತ್ತಲ್ಲೇ ದಿಲ್ಲಿಗೆ 9ನೇ ಸ್ಥಾನ

ನವದೆಹಲಿ: ದೆಹಲಿ ವಿಮಾನ ನಿಲ್ದಾಣ 2024ರಲ್ಲಿ 7.7 ಕೋಟಿಗಿಂತ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿ, ವಿಶ್ವದ 9ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023ರಲ್ಲಿ ಇದು 10ನೇ ಸ್ಥಾನದಲ್ಲಿತ್ತು.

ಏರ್​ಪೋರ್ಟ್ಸ್ ಕೌನ್ಸಿಲ್ ಇಂಟರ್​ನ್ಯಾಷನಲ್ ವಿಶ್ವದ 20 ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣ 10.8 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿ ಮೊದಲ ಸ್ಥಾನದಲ್ಲಿದೆ. ದುಬೈ 9.23 ಲಕ್ಷ ಪ್ರಯಾಣಿಕರು, ಅಮೆರಿಕದ ಡಲ್ಲಾಸ್/ಫೋರ್ಟ್​ವರ್ಥ್ 8.78 ಲಕ್ಷ ಪ್ರಯಾಣಿಕರೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

2024ರಲ್ಲಿ ಜಾಗತಿಕ ಮಟ್ಟದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 9.4 ಶತಕೋಟಿ ಆಗಿ ಹೊಸ ಗರಿಷ್ಠ ಮಟ್ಟ ತಲುಪಿದೆ. ಇದು 2023ಕ್ಕಿಂತ ಶೇ. 8.4ರಷ್ಟು ಹೆಚ್ಚಳ. ಕೋವಿಡ್​ಪೂರ್ವ ಮಟ್ಟಕ್ಕಿಂತ (2019) ಶೇ. 2.7ರಷ್ಟು ಏರಿಕೆ. ಟಾಪ್ 20 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅಮೆರಿಕದ್ದೇ 6 ನಿಲ್ದಾಣಗಳಿವೆ. ಟಾಪ್ 10ನಲ್ಲಿರುವ ಇತರ ವಿಮಾನ ನಿಲ್ದಾಣಗಳೆಂದರೆ ಜಪಾನ್​ನ ಹನೇಡಾ (4), ಲಂಡನ್​ನ ಹೀಥ್ರೂ (5), ಅಮೆರಿಕದ ಡೆನ್ವರ್ (6), ಟರ್ಕಿಯ ಇಸ್ತಾಂಬುಲ್ (7), ಅಮೆರಿಕದ ಷಿಕಾಗೊ (8) ಮತ್ತು ಚೀನಾದ ಶಾಂಘೖ (10). ವಿಮಾನಗಳ ಸಂಚಾರದ ಸಂಖ್ಯೆ ದೃಷ್ಟಿಯಿಂದ, ದೆಹಲಿ 2023ರಲ್ಲಿ 13ನೇ ಸ್ಥಾನದಲ್ಲಿ ಇದ್ದದ್ದು 2024ರಲ್ಲಿ 15ನೇ ಸ್ಥಾನ ಪಡೆದಿದೆ.