ದೆಹಲಿ: ನೇಪಾಳದಲ್ಲಿ ಹೋಟೆಲ್‌ಗಳು, ಯುಪಿಯಲ್ಲಿ ಅತಿಥಿ ಗೃಹಗಳನ್ನು ಹೊಂದಿದ್ದ ಕೋಟ್ಯಾಧಿಪತಿ ಕಳ್ಳನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಂಧಿತನನ್ನು ಮನೊಜ್ ಚೌಬೆ ಎಂದು ಗುರತಿಸಲಾಗಿದ್ದು, ಈತನ ಇತಿಹಾಸ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಬಂಧಿತನು 200ಕ್ಕೂ ಹೆಚ್ಚು ಕಳ್ಳತನ ಮಾಡಿದ್ದು, ಈತ ಹೋಟೆಲ್ ಮಾಲೀಕ ಮಾತ್ರವಲ್ಲ, ಕಳ್ಳತನದ ವಸ್ತುಗಳಿಂದ ಮಾಡಿದ ಆಸ್ತಿಯಿಂದ ಲಕ್ಷಗಟ್ಟಲೆ ಬಾಡಿಗೆ ಪಡೆಯುತ್ತಿದ್ದಾನೆ. ಆರೋಪಿಯು ಸುಮಾರು 25 ವರ್ಷಗಳಿಂದ ಕುಟುಂಬದಿಂದ ತಲೆಮರೆಸಿಕೊಂಡು ಎರಡು ಮದುವೆಗಳನ್ನು ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ವರ್ಷದ ಮಗುವಿನ ಪ್ರಾಣವನ್ನೇ ತೆಗೆದ ಕಡಲೆಬೀಜ..!
ಮೊದಮೊದಲು ಈತನ ಕುಟುಂಬವು ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ ವಾಸಿಸುತ್ತಿತ್ತು. ಬಳಿಕ ಕುಟುಂಬವು ನೇಪಾಳದಲ್ಲಿ ನೆಲೆಸಿದ್ದರೂ. ಮನೋಜ್ 1997ರಲ್ಲಿ ದೆಹಲಿಗೆ ಬಂದು ಕೀರ್ತಿನಗರ ಪೊಲೀಸ್ ಠಾಣೆಯಲ್ಲಿ ಕ್ಯಾಂಟೀನ್ ನಡೆಸಲು ಆರಂಭಿಸಿದ್ದ. ಕ್ಯಾಂಟೀನ್ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮನೆಗಳನ್ನೇ ಟಾರ್ಗೆಟ್ ಕಳ್ಳತನ ಮಾಡಿ ಮತ್ತೆ ಪತ್ನಿ ಮತ್ತು ಮಕ್ಕಳ ಬಳಿ ಬರುತ್ತಿದ್ದ. ಕದ್ದ ಹಣದಲ್ಲಿ ಮನೋಜ್ ನೇಪಾಳದಲ್ಲಿ ಹೋಟೆಲ್ ಕಟ್ಟಿಸಿಕೊಂಡು ಆರಾಮಾಗಿದ್ದ.
ಈ ಸಮಯದಲ್ಲಿ, ಅವರು ಮೊದಲು ಯುಪಿಯ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬಳ ಮಗಳನ್ನು ಮದುವೆಯಾಗಿ, ದೆಹಲಿಯಲ್ಲಿ ಪಾರ್ಕಿಂಗ್ ಗುತ್ತಿಗೆ ತೆಗೆದುಕೊಳ್ಳುವುದಾಗಿ ಆತ ತನ್ನ ಅತ್ತೆಯ ಬಳಿ ಹೇಳಿಕೊಂಡಿದ್ದ. ಅದಕ್ಕೇ ವರ್ಷದಲ್ಲಿ ಆರರಿಂದ ಎಂಟು ತಿಂಗಳು ದೆಹಲಿಯಲ್ಲೇ ಇರಬೇಕಾಗುತ್ತದೆ ಎಂದೂ ಹೇಳಿದ್ದ. ಬಳಿಕ ಕಳ್ಳತನ ಮುಂದುವರೆಸಿದ್ದು, ಆ ಹಣದಲ್ಲಿ ಪತ್ನಿಯ ಹೆಸರಿನಲ್ಲಿ ಸಿದ್ದಾರ್ಥ್ ನಗರದ ಶೋಹ್ರತ್‌ಗಢ ಪಟ್ಟಣದಲ್ಲಿ ಅತಿಥಿ ಗೃಹವನ್ನು ಸಹ ನಿರ್ಮಿಸಿದ್ದಾನೆ. ಅಲ್ಲದೇ, ಮನೋಜ್ ತನ್ನ ಜಮೀನನ್ನು ಅದೇ ಊರಿನ ಆಸ್ಪತ್ರೆಗೆ ಲೀಸ್ಗೆ ನೀಡಿದ್ದು, ತಿಂಗಳಿಗೆ 2 ಲಕ್ಷ ಬಾಡಿಗೆ ಪಡೆಯುತ್ತಿದ್ದ.
ತದನಂತರ ಮತ್ತೆ ಸುಮಾರು ಒಂಬತ್ತು ಬಾರಿ ಮನೋಜ್ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪ್ರತಿ ಬಾರಿಯೂ ತನ್ನ ಹೆಸರನ್ನು ರಾಜು ಎಂದು ಹೇಳುತ್ತಿದ್ದ. ಆತನ ಕುಟುಂಬದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.ಆದ್ದರಿಂದಲೇ ಲಕ್ಕೋದಲ್ಲಿ ನೆಲೆಸಿರುವ ಮನೋಜ್ ಕುಟುಂಬಕ್ಕೆ ಆತನ ಅಪರಾಧ ಹಿನ್ನೆಲೆಯ ಬಗ್ಗೆ ಮಾಹಿತಿ ಸಿಗಲಿಲ್ಲ.
ಇನ್ನೊಂದು ವಿಶೇಷ ಮಾಹಿತಿ ಎಂದರೆ ಈತನ ಮಕ್ಕಳು ಲಕ್ಕೋದ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದು, ಕೊನೆಗೆ ಪೊಲೀಸರು ಆರೋಪಿಯ ಸಂಬಂಧಿಕರನ್ನು ಪತ್ತೆ ಹಚ್ಚಿ ಆತನ ಅಪರಾಧ ಹಿನ್ನೆಲೆಯ ಬಗ್ಗೆ ತಿಳಿಸಿದ್ದಾರೆ. ಆರಂಭದಲ್ಲಿ ಮನೆಯವರು ನಂಬಲಿಲ್ಲ, ಆದರೆ ನಂತರ ಅವನು ತನ್ನ ಅಪರಾಧವನ್ನು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾನೆ. ಮನೋಜ್ ಅಲಿಯಾಸ್ ರಾಜು ವಿರುದ್ಧ ಇದುವರೆಗೆ 15 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 9 ಬಾರಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಸುಮಾರು ಇನ್ನೂರು ಘಟನೆಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಸಿಕ್ಕಿಬಿದ್ದಿದ್ದು ಹೀಗೆ:
ಕಳೆದ ಜುಲೈನಲ್ಲಿ ಮನೋಜ್ ಮಾಡೆಲ್ ಟೌನ್ ಪ್ರದೇಶದಲ್ಲಿ ಬೀಗ ಹಾಕಿದ ಮನೆಯನ್ನು ಗುರಿಯಾಗಿಸಿಕೊಂಡಿದ್ದ. ಕಿಟಕಿಯ ಗಾಜು ಒಡೆದು ಮನೆಯೊಳಗೆ ನುಗ್ಗಿದ್ದಾನೆ. ಗಾಜು ಒಡೆಯುವ ವೇಳೆ ಗಾಯಗೊಂಡಿದ್ದ ಅವರು, ಅಪಾರ ರಕ್ತಸ್ರಾವದಿಂದ ಸುಮಾರು ಒಂದು ಗಂಟೆ ಪ್ರಜ್ಞಾಹೀನನಾಗಿದ್ದ. ನಂತರ ಪ್ರಜ್ಞೆ ಬಂದ ಮೇಲೆ ಮನೆಯ ಸಾಮಾನುಗಳನ್ನು ಪ್ಯಾಕ್ ಮಾಡಿ ಹೊರಗೆ ಬಂದು ಸ್ಕೂಟಿ ತೆಗೆದುಕೊಂಡು ಎಸ್ಕೇಪ್ ಆಗಿದ್ದ. ಇದೆಲ್ಲ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಮನೋಜ್‌ನ ಮುಖವನ್ನು ನೋಡಿ ಆತನ ಮೇಳೆ ಕಣ್ಣಿಟ್ಟಿದ್ದರು.
ಇದಾದ ಬಳಿಕ ಆತ ನಗರದಲ್ಲಿಯೇ ಒಂದೆಡೆ ಸ್ಕೂಟಿಯಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರು ಸ್ಕೂಟಿಯ ನಂಬರ್ ಮೂಲಕ ಅಡ್ರೆಸ್ ಪತ್ತೆ ಹಚ್ಚಿದ್ದು, ಅದು ವಿನೋದ್ ಥಾಪಾ ಎಂಬುವರ ಹೆಸರಿನಲ್ಲಿತ್ತು, ಕೊನೆಗೆ ಸೋದರ ಮಾವನ ಮಗಳ ಜೊತೆ ಸ್ಕೂಟಿಯಲ್ಲಿ ಸುತ್ತಾಡುವ ವೇಳೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಹಿಡಿದಿದ್ದಾರೆ.(ಏಜೆನ್ಸೀಸ್)