ನ್ಯೂಸ್

ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಪ್ರಾರ್ಥನೆ- ತೆಲಂಗಾಣ, ಆಂಧ್ರ, ತಮಿಳುನಾಡು ಹೈ ಅಲರ್ಟ್ - ರಾಜ್ಯದ 45 ಜನ ಭಾಗಿ!

ಬೆಂಗಳೂರು/ನವದೆಹಲಿ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರ ಪೈಕಿ ಅನೇಕರಿಗೆ ಕರೊನಾ ಸೋಂಕು ತಗುಲಿದೆ. ಅಲ್ಲಿ, ದೇಶದ ನಾನಾ ಭಾಗಗಳ ಜನರು ಭಾಗಿಯಾಗಿದ್ದು, ಇದರಿಂದಾಗಿ ಹಲವು ರಾಜ್ಯಗಳಲ್ಲಿ ಆತಂಕದ ಮೋಡ ಕವಿದಿದೆ. ತೆಲಂಗಾಣ, ಆಂಧ್ರ, ತಮಿಳುನಾಡುಗಳು ಹೈ ಅಲರ್ಟ್​ನಲ್ಲಿವೆ.

ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ 24 ಜನರಿಗೆ ಸೋಂಕು ಧೃಡಪಟ್ಟಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಘೋಷಿಸಿದ ಬೆನ್ನಿಗೇ, ಎಲ್ಲ ರಾಜ್ಯಗಳೂ ಎಚ್ಚೆತ್ತುಕೊಂಡಿವೆ. ಇದರೊಂದಿಗೆ ಕರ್ನಾಟಕದ 45 ಜನರು ಈ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿರುವ ಆತಂಕಕಾರಿ ವಿಷಯವೂ ಬಹಿರಂಗವಾಗಿದೆ. ಈ ಬಗ್ಗೆ ಕರ್ನಾಟಕದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಇದರಂತೆ, ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾರ್ಚ್ 10 ರಂದು ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದರು.

ಹೀಗಾಗಿ, ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, Quarantine ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ.

ಅಲ್ಲಿಗೆ ಆಸ್ಟ್ರೇಲಿಯಾ, ಸಿಂಗಪೂರ್, ದುಬೈ, ಸೌದಿ ಅರೇಬಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಆದಷ್ಟು ಬೇಗ ಗುರುತಿಸಿ, ಅವರನ್ನು Quarantine ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.