ನ್ಯೂಸ್

ದೆಹಲಿಗೂ ಲಗ್ಗೆ ಇಡಲಿರುವ ನಂದಿನಿ 1 ಲಕ್ಷ ಲೀಟರ್ ಹಾಲು ಮಾರಾಟ ಗುರಿ

Bengaluru - Political - Shivananda Tagadur

ಬೆಂಗಳೂರು:

ನಂದಿನಿ ಬ್ರಾಂಡ್‌ನ ಕೆಎಂಎ್ ಹಾಲು ದೆಹಲಿ ಮಾರುಕಟ್ಟೆಗೂ ಲಗ್ಗೆ ಹಾಕಲಿದ್ದು, ನ.21ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಮೊದಲ ಹಂತದಲ್ಲಿ ಕನಿಷ್ಠ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. 6 ತಿಂಗಳಲ್ಲಿ 5 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿಯನ್ನು ಕೆಎಂಎ್ ಹೊಂದಿದೆ.

ಮಾರುಕಟ್ಟೆ ವ್ಯಾಪ್ತಿ ವಿಸ್ತಾರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೆಎಂಎ್, ಈಗಾಗಲೇ ಹೈದರಾಬಾದ್, ಮುಂಬಯಿ, ಚೆನ್ನೈಯಲ್ಲಿ ಯಶಸ್ವಿಯಾಗಿ ಹಾಲು ಮಾರಾಟವನ್ನು ಹೆಚ್ಚಿಸಿಕೊಂಡಿದೆ.

ಅದೇ ರೀತಿಯಲ್ಲಿ ದೆಹಲಿಯಲ್ಲಿಯೂ ಹಾಲು ಮಾರಾಟದಲ್ಲಿ ಹಿಡಿತ ಸಾಧಿಸುವ ಮೂಲಕ ಅಮೂಲ್‌ಗೆ ಸ್ಪರ್ಧೆಯೊಡ್ಡಲು ಸಜ್ಜಾಗಿ ನಿಂತಿದೆ.

ದೆಹಲಿಯಲ್ಲಿ ಈಗಾಗಲೇ ಹಾಲು ಸಂಸ್ಕರಿಸಿ ಪ್ಯಾಕೆಟ್ ಮಾಡುವ ಯುನಿಟ್‌ನ್ನು ಬಾಡಿಗೆ ಪಡೆದಿರುವ ಕೆಎಂಎ್, ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿ ಹಾಲು ಪ್ಯಾಕೆಟ್ ಮಾಡಿ ಮಾರಾಟಕ್ಕೆ ಕಳುಹಿಸುತ್ತಿದೆ.

ಸುಮಾರು 2 ಸಾವಿರ ಕಿ.ಮೀ.ದೂರದಲ್ಲಿರುವ ದೆಹಲಿಗೆ ಬೆಂಗಳೂರಿನಿಂದ ಹಾಲು ಸಾಗಾಟ ಮಾಡಲು ಕನಿಷ್ಠ 44 ಗಂಟೆಗಳು ಬೇಕು ಎಂದು ಅಂದಾಜಿಸಲಾಗಿದೆ. ಪ್ರತಿ ದಿನ ಇಲ್ಲಿಂದಲೇ ಹಾಲು ದೆಹಲಿಗೆ ಸಾಗಿಸಿ ಅಲ್ಲಿನ ಘಟಕದಲ್ಲಿ ಹಾಲು ಪ್ಯಾಕೇಟ್ ಮಾಡಿ ಮಾರುಕಟ್ಟೆಗೆ ರವಾನಿಸಲಾಗುವುದು ಎಂದು ಕೆಎಂಎ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಿಂದ ದೆಹಲಿಗೆ ಹಾಲು ಸಾಗಾಟ ಮಾಡಿ, ಅಲ್ಲಿ ಕಾಲು ಲೀಟರ್, ಅರ್ಧ ಲೀಟರ್ ಮತ್ತು ಒಂದು ಲೀಟರ್‌ನ ಪ್ಯಾಕೆಟ್‌ನಲ್ಲಿ ಮಾರುಕಟ್ಟೆಗೆ ಕಳುಹಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಎರಡು ಬಗೆಯ ಹಾಲು, ಮೊಸರು, ಮಜ್ಜಿಗೆಯನ್ನು ಕೊಡಲಾಗುವುದು ಎಂದಿದ್ದಾರೆ.

ಇನ್ನುಳಿದಂತೆ ಮಾರಕಟ್ಟೆಯಲ್ಲಿ ನಂದಿನಿ ಬ್ರಾಂಡ್‌ನ ಎಲ್ಲಾ ರೀತಿಯ ಐಸ್‌ಕ್ರೀಂ, ಮೈಸೂರು ಪಾಕ್ ಸೇರಿದಂತೆ ಎಲ್ಲಾ ರೀತಿಯ ಸಿಹಿ, ತುಪ್ಪ, ಬೆಣ್ಣೆ ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನಗಳು ಸಿಗಲಿವೆ.

ದೆಹಲಿಯಲ್ಲಿ ನಂದಿನಿ ಪಾರ್ಲರ್ ತೆರೆಯುವುದು ಕೂಡ ಸವಾಲಿನ ಕೆಲಸವಾಗಿದೆ. ದೆಹಲಿಯಲ್ಲಿ ಯಶಸ್ವಿಯಾದರೆ, ನೆರೆ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣಕ್ಕೂ ವಿಸ್ತರಿಸಲು ಉದ್ದೇಶಿಸಲಾಗಿದೆ.

*ದೆಹಲಿಯಲ್ಲಿ ನಂದಿನಿ ಬ್ರಾಂಡ್‌ನ ಹಾಲು ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಮಾರುಕಟ್ಟೆ ಜಾಲವನ್ನು ವಿಸ್ತಾರ ಮಾಡಲಾಗುತ್ತಿದೆ. ನ.21ಕ್ಕೆ ಅಧಿಕೃತವಾಗಿ ಚಾಲನೆ ನೀಡಲು ಉದ್ದೇಶಿಸಲಾಗಿದೆ.

-ಜಗದೀಶ್, ಕೆಎಂಎ್ ಎಂಡಿ