ನ್ಯೂಸ್

ಮಾಜಿ ಸಿಎಂ ಡಿವಿಎಸ್‌ಗೆ ದೆಹಲಿ ಬುಲಾವ್; ಮೈತ್ರಿಗೆ ಅಪಸ್ವರದ ಚರ್ಚೆ ?

ಬೆಂಗಳೂರು: ಜೆಡಿಎಸ್ ಜತೆಗೆ ಮೈತ್ರಿ, ಪಕ್ಷದಲ್ಲಿ ಬಣಗಾರಿಕೆ ಕುರಿತು ಬಹಿರಂಗವಾಗಿ ಆಕ್ಷೇಪಿಸಿ, ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಬಿಜೆಪಿ ವರಿಷ್ಠರು ಬುಲಾವ್ ನೀಡಿದ್ದಾರೆ.

ಹಿರಿಯ ನಾಯಕರ ಸೂಚನೆಯಂತೆ ಈ ಆಹ್ವಾನ ನೀಡಲಾಗಿದೆ. ಅ.25ರಂದು ಡಿವಿಎಸ್ ದೆಹಲಿಗೆ ತೆರಳಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಸೆ ಮೇರೆಗೆ ಎನ್‌ಡಿಎ ತೆಕ್ಕೆಗೆ ಜೆಡಿಎಸ್ ಸೇರ್ಪಡೆಯಾಗಿದೆ. ಲೋಕಸಭೆ ಚುನಾವಣೆಗಾಗಿ ಸೀಟುಗಳ ಹೊಂದಾಣಿಕೆ ಮತ್ತು ಹಂಚಿಕೆ ಬಗ್ಗೆ ಮಾತುಕತೆ ಬಾಕಿಯಿದೆ.

ಈ ನಡುವೆ ಜೆಡಿಎಸ್ ಜತೆಗೆ ಮೈತ್ರಿ ಬಗ್ಗೆ ಕೆಲವರು ಆಂತರಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರೆ, ಡಿ.ವಿ.ಸದಾನಂದಗೌಡ ಬಹಿರಂಗವಾಗಿ ವಿರೋಧಿಸಿದ್ದರು. ಸ್ಥಳೀಯ ಮುಖಂಡರು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದರು.

ಅಲ್ಲದೆ, ರಾಜ್ಯ ಬಿಜೆಪಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಣಗಳಿವೆ. ಗುಂಪುಗಾರಿಕೆ ಸರಿಪಡಿಸಲು ವರಿಷ್ಠರು ಎಂದೋ ಪ್ರಯತ್ನಿಸಬೇಕಾಗಿತ್ತು ಎಂಬ ಅಭಿಪ್ರಾಯವನ್ನು ಸದಾನಂದಗೌಡ ವ್ಯಕ್ತಪಡಿಸಿದ್ದರು.

ಎಚ್ಚರಿಕೆ ಸಾಧ್ಯತೆ

ಲೋಕಸಭೆ ಚುನಾವಣೆಯಲ್ಲಿ ಕೆಲ ಹಾಲಿ ಸದಸ್ಯರ ಟಿಕೆಟ್‌ಗೆ ಕತ್ತರಿ ಎಂಬ ವರದಿ ಮಾಧ್ಯಮದಲ್ಲಿ ಪ್ರಕಟವಾದಾಗಲೂ ಡಿವಿಎಸ್ ಆಕ್ಷೇಪಿಸಿದ್ದರು. ಅಷ್ಟೇ ಅಲ್ಲ, ಬೆಂಗಳೂರು ಉತ್ತರಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವೆ ಎಂಬ ಮಾತೂ ಸೇರಿಸಿದ್ದರು.

ಮೈತ್ರಿಗೆ ವಿರೋಧ ಸೇರಿ ಡಿವಿಎಸ್ ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ ನಂತರ ದೆಹಲಿಯಿಂದ ಬುಲಾವ್ ಬಂದಿರುವುದು ಗಮನಸೆಳೆದಿದೆ. ರಾಜ್ಯ ರಾಜಕೀಯ ವಿದ್ಯಮಾನ ಹಾಗೂ ಪಕ್ಷದ ಸಂಘಟನಾತ್ಮಕ ಚಟುವಟಿಕೆ ಬಗ್ಗೆ ಚರ್ಚೆ ನಡೆಯಲಿದೆ.

ಅಲ್ಲದೆ, ಜೆಡಿಎಸ್ ಮೈತ್ರಿ ಮುಂದುವರಿದ ಭಾಗವಾಗಿ ಸೀಟುಗಳು ಮತ್ತು ಕ್ಷೇತ್ರಗಳ ಹಂಚಿಕೆ ಬಗ್ಗೆ ನಡ್ಡಾ ಅಭಿಪ್ರಾಯ ಪಡೆಯಲಿದ್ದಾರೆ. ಇದೇ ವೇಳೆ ಪಕ್ಷದ ವರ್ಚಸ್ಸಿಗೆ ಧಕ್ಕೆ, ಸಂಘಟನಾ ಬಲ ಕುಗ್ಗಿಸುವಂತಹ ಹೇಳಿಕೆ ಸರಿಯಲ್ಲವೆಂದು ಡಿ.ವಿ.ಸದಾನಂದಗೌಡರಿಗೆ ಎಚ್ಚರಿಸಿ ಕಳುಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.