ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ತಡೆಹಿಡಿದ ದೆಹಲಿ ಪಟಿಯಾಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಈ ನಾಲ್ವರು ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೇರಿಸಬೇಕು. ಬೇರೆಬೇರೆಯಾಗಿ ನೇಣಿಗೆ ಹಾಕುವಂತಿಲ್ಲ ಎಂದು ಸೂಚನೆ ನೀಡಿದ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್ ಅವರು, ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಅದನ್ನೆಲ್ಲ ಪೂರ್ತಿಗೊಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ತಮಗೆ ವಿಧಿಸಲಾಗಿರುವ ಮರಣದಂಡನೆಯನ್ನು ವಿಳಂಬಗೊಳಿಸಿಕೊಳ್ಳಲು ಲೆಕ್ಕಾಚಾರ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೈಕೋರ್ಟ್ನಲ್ಲಿ ಹೇಳಿದ್ದರು.
ಆದರೆ ಹೈಕೋರ್ಟ್, ಅಪರಾಧಿಗಳು ಮರಣದಂಡನೆ ವಿಳಂಬದ ತಂತ್ರ ಅನುಸರಿಸಿದ್ದಾರೆ ಎಂದು ವಾದಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ 2017ರಲ್ಲಿಯೇ ಮರಣದಂಡನೆ ವಿಧಿಸಿದೆ. ಆದರೆ ಅದಾದ ಬಳಿಕ ಅವರಿಗೆ ಡೆತ್ ವಾರಂಟ್ ಜಾರಿ ಮಾಡುವಲ್ಲಿ ಯಾರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.
ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ರನ್ನು ಫೆ.1ರಂದು ನೇಣಿಗೆ ಏರಿಸಬೇಕಿತ್ತು. ಆದರೆ ಈ ಮಧ್ಯೆ ಕೆಲವು ಕಾನೂನು ಪ್ರಕ್ರಿಯೆಗಳಿಂದಾಗಿ ದೆಹಲಿ ನ್ಯಾಯಾಲಯ ಅವರ ಮರಣದಂಡನೆಗೆ ತಡೆ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಫೆ.2ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್ ತೀರ್ಪು ಕಾಯ್ದಿರಿಸಿದ್ದರು.(ಏಜೆನ್ಸೀಸ್)