ನ್ಯೂಸ್

ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಕಡ್ಡಾಯ ಆನ್​ಲೈನ್​ ತರಬೇತಿ! Online First-Aid Training

Online First-Aid Training : ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸಲುವಾಗಿ ಶಿಕ್ಷಕರಿಗೆ ಅಗತ್ಯವಾದ ಪ್ರಥಮ ಚಿಕಿತ್ಸಾ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ಉದ್ದೇಶದಿಂದ ದೆಹಲಿ ಸರ್ಕಾರ ಆನ್​ಲೈನ್​ ತರಬೇತಿ ಕಾರ್ಯಕ್ರಮವನ್ನು ಜಾರಿ ಮಾಡಿದೆ.

ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (SCERT) ಸೋಮವಾರ (ಅ.06) ಹೊರಡಿಸಿದ ಆದೇಶದ ಪ್ರಕಾರ, ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ (MOOC) ಸ್ವರೂಪದಡಿಯಲ್ಲಿ ತರಬೇತಿಯನ್ನು ಅಕ್ಟೋಬರ್​ 9 ರಂದು ಪ್ರಾರಂಭವಾಗಿ ಇದೇ ತಿಂಗಳ 19 ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದೆ.

ಪ್ರಥಮ ಚಿಕಿತ್ಸೆ- ಸವಾಲಿನ ಆರೋಗ್ಯ ಪರಿಸ್ಥಿತಿಗಳಲ್ಲಿ ಮಾನವ ಪ್ರತಿಕ್ರಿಯೆಗಳ ಸುಧಾರಿಕೆ ಎಂಬ ಶೀರ್ಷಿಕೆ ಅಡಿಯಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಲಾಗಿದೆ.

ಕಾರ್ಯಕ್ರಮದ ಮಹತ್ವ

ಈ ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆಗೆ ಅನ್ವಯವಾಗುವಂತೆ, ಆರೋಗ್ಯ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು, ಅನಿರೀಕ್ಷಿತ ಆರೋಗ್ಯ ಸಂದರ್ಭಗಳಲ್ಲಿ ಸನ್ನದ್ಧತೆಯ ಮಹತ್ವ, ಶಾಲೆಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಹೊಂದುವ ಬಗ್ಗೆ ಅರಿವನ್ನು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕೋರ್ಸ್​ನ್ನು ಪೂರ್ಣಗೊಳಿಸಲು ಪ್ರತಿ ಶಿಕ್ಷಕರು ಮೌಲ್ಯಮಾಪನದಲ್ಲಿ ಕನಿಷ್ಠ 70 ಪ್ರತಿಶತ ಅಂಕಗಳನ್ನು ಗಳಿಸಬೇಕಾಗುತ್ತದೆ. ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಭಾಗವಹಿಸುವವರು ತಮ್ಮ ಪ್ರಮಾಣಪತ್ರಗಳನ್ನು ವೇದಿಕೆಯಿಂದ ಡೌನ್‌ಲೋಡ್ ಮಾಡಬಹುದು ಎಂದು ತಿಳಿಸಿದೆ. (ಏಜೆನ್ಸೀಸ್)