ನವದೆಹಲಿ: ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದು ಇಂದು ತಿಳಿಯಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ.
2015ರಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರೇ ಮತ್ತೆ ಅಧಿಕಾರ ಪಡೆಯಲಿದ್ದಾರೆ ಎನ್ನುವುದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಸಾರಾಂಶ.
ಚುನಾವಣೆ ಮುಗಿದ ಬಳಿಕ ವಿವಾದವೊಂದು ಕೇಳಿ ಬಂದಿತ್ತು. ಚುನಾವಣಾ ಆಯೋಗವು ಮತದಾನದ ಅಂಕಿ ಅಂಶವನ್ನು ಘೋಷಿಸಲು ತಡ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಇದಕ್ಕೆ ಚುನಾವಣಾ ಆಯೋಗ ಸಮರ್ಥನೆ ನೀಡಿತ್ತು.
ಇಂದು ನಡೆಯಲಿರುವ ಮತ ಎಣಿಕೆ ಕಾರ್ಯ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮುನ್ನ ತಿಳಿಯಬೇಕಾದ ಅಂಶಗಳು ಇವು.
1. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಪ್ಗೆ ಬಹುಮತ ಸಿಗಲಿದೆ. 6ಕ್ಕಿಂತ ಹೆಚ್ಚು ಸಮೀಕ್ಷೆಗಳು 70 ಸ್ಥಾನದಲ್ಲಿ 56 ಆಪ್ ಪಾಲಾಗಲಿವೆ ಎಂದೇ ತಿಳಿಸಿವೆ. ಇನ್ನು ಬಿಜೆಪಿಗೆ 14 ಸ್ಥಾನ ದೊರೆಯಬಹುದು ಎನ್ನುವುದು ಸದ್ಯದ ಲೆಕ್ಕಾಚಾರ.
2. 2015ರ ಫಲಿತಾಂಶ ಮರುಕಳಿಸುತ್ತದೆ ಎನ್ನುವುದು ಆಪ್ ವಿಶ್ವಾಸ. ಆಗ ಆಪ್ 70ರಲ್ಲಿ 67 ಸ್ಥಾನ ಪಡೆದಿತ್ತು. ಶಾಲೆಗಳ ಉನ್ನತೀಕರಣ, ಉಚಿತ ನೀರು ಮತ್ತು ವಿದ್ಯುತ್, ಓಣಿಗೊಂದು ಆಸ್ಪತ್ರೆ ಇವು ಆಪ್ ಸಾಧನೆಗಳು.
3. ಆಪ್ ಪಕ್ಷವು 10 ಅಂಶಗಳುಳ್ಳ ಸೌಲಭ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅವುಗಳ ಈಡೇರಿಕೆಯ ಭರವಸೆ ನೀಡಿತ್ತು.
4. ಲೋಕ ಸಭಾ ಚುನಾವಣೆಯಲ್ಲಿ 7 ಸ್ಥಾನಗಳನ್ನೂ ತನ್ನದಾಗಿಸಿಕೊಂಡತೆ ವಿಧಾನಸಭಾ ಚುನಾವಣೆಯಲ್ಲೂ ಜಯ ದಾಖಲಿಸುವ ಗುರಿಯಿಂದ ಬಿಜೆಪಿ ನಿರಂತರ ಪ್ರಯತ್ನ ನಡೆಸಿತ್ತು. ಕೇಂದ್ರ ಗೃಹ ಸಚಿವ ಖುದ್ದು ಅಖಾಡಕ್ಕಿಳಿದು ಮತ ಯಾಚನೆ ಮಾಡಿದ್ದರು.
5. ರಾಜ್ಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಪ್ರಕಾರ ಬಿಜೆಪಿ 48 ಸ್ಥಾನ ಗೆದ್ದು ಕೊಳ್ಳಲಿದೆ. ಸಮೀಕ್ಷೆಗಳು ಸುಳ್ಳಾಗಲಿವೆ ಎಂದಿದ್ದಾರೆ.
6. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ನಂತರ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಇಲ್ಲಿ ಪ್ರಚಾರ ಮಾಡಿದ್ದರು.
7. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯನಾಗರಿಕರ ನೋಂದಣಿ ವಿರುದ್ಧದ ಪ್ರತಿಭಟನೆ ಸದ್ದು ದೆಹಲಿಯಲ್ಲಿ ಜೋರಾಗಿತ್ತು. ಈ ನಡುವೆ ಆಪ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದಿದ್ದರು.
8. ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಹಾಳುಮಾಡಲು ಪ್ರಯತ್ನಿಸಲಾಗಿದೆ ಎಂದು ಶನಿವಾರ ಆಪ್ ಆರೋಪಿಸಿತ್ತು. ಮತ ಯಂತ್ರಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದೆ ಎಂದು ಆರೋಪಿಸಿಲಾಗಿತ್ತು. ಆದರೆ ಆಯೋಗ ಈ ಯಂತ್ರಗಳು ಮತದಾನಕ್ಕೆ ಬಳಕೆಯಾಗದವು ಎಂದು ಸ್ಪಷ್ಟಿಕರಣ ನೀಡಿತ್ತು.
9. 2015ರಲ್ಲಿ ಆಪ್ಗೆ ಶೇ.54.3 ಮತ, ಬಿಜೆಪಿಗೆ ಶೇ.32 ಮತ್ತು ಕಾಂಗ್ರೆಸ್ ಶೇ.9.6 ಮತ ಪಡೆದಿದ್ದವು. (ಏಜೆನ್ಸೀಸ್)