ನ್ಯೂಸ್

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ತೇಜಸ್ವಿ, ರಾಬ್ರಿ ದೇವಿ ಸೇರಿದಂತೆ 6 ಮಂದಿಗೆ ಜಾಮೀನು

ಬಿಹಾರ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್, ರಾಬ್ರಿ ದೇವಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿ ಸಂಸದೆ ಮಿಸಾ ಭಾರತಿ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯವು ರಾಬ್ರಿ, ಲಾಲು ಮತ್ತು ತೇಜಸ್ವಿ ಯಾದವ್ ಸೇರಿದಂತೆ 17 ಮಂದಿಗೆ 50,000 ರೂ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದೆ ಎಂದು ಹೇಳಲಾಗುತ್ತಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಇವರೊಂದಿಗೆ ರಾಜ್ಯಸಭಾ ಸಂಸದರಾದ ಮಿಸಾ ಭಾರತಿ ಮತ್ತು ಮನೋಜ್ ಝಾ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರ ಮುಂದೆ ವಿಚಾರಣೆ ನಡೆಯಿತು.

ವಿಚಾರಣೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಲಾಲು ಯಾದವ್, ವಿಚಾರಣೆಗಳು ನಡೆಯುತ್ತಲೇ ಇರುತ್ತವೆ. ತಾವು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಅದಕ್ಕೆ ಹೆದರುವುದಿಲ್ಲ ಎಂದು ಹೇಳಿದರು.

ಸೆಪ್ಟೆಂಬರ್ 22 ರಂದು ದೆಹಲಿ ನ್ಯಾಯಾಲಯವು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಸೇರಿದಂತೆ ಇತರ 14 ಮಂದಿಗೆ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಮನ್ಸ್ ಜಾರಿ ಮಾಡಿತ್ತು.

ಸಿಬಿಐ ಇತ್ತೀಚೆಗೆ ಲಾಲು ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಇತರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಮೇ 18, 2022 ರಂದು ಪ್ರಕರಣ ದಾಖಲಾಗಿತ್ತು. 2004-2009ರ ನಡುವೆ ಅಂದಿನ ಕೇಂದ್ರ ರೈಲ್ವೇ ಸಚಿವರು ರೈಲ್ವೆ ಇಲಾಖೆಯ ಗ್ರೂಪ್ “ಡಿ” ನೇಮಕಾತಿಗೆ ಪ್ರತಿಯಾಗಿ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಜಮೀನು ಪಡೆದು ಆರ್ಥಿಕ ಲಾಭ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಬಿಹಾರ ಜಾತಿ ಗಣತಿ ವರದಿ ಬಿಡುಗಡೆಯಾದ ಬಳಿಕ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.

ಲಾಲು ಯಾದವ್ ಮಂಗಳವಾರ ರಾತ್ರಿ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಲ್ಲದೇ ಇಡೀ ದೇಶದಲ್ಲಿ ಜಾತಿ ಗಣತಿಗೆ ಸಂಬಂಧಿಸಿದಂತೆ ಮುಂದಿನ ಕಾರ್ಯತಂತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಬಿಹಾರದಲ್ಲಿ ಜಾತಿ ಗಣತಿ ನಡೆಸಿದ್ದೇವೆ, ಈಗ ಇಡೀ ದೇಶದಲ್ಲಿ ನಡೆಯಬೇಕು. ಜಾತಿ ಗಣತಿಯಿಂದ ದೇಶಾದ್ಯಂತ ಬಡವರು ಮತ್ತು ದಲಿತರಿಗೆ ಅನುಕೂಲವಾಗಲಿದೆ ಎಂದು ಲಾಲು ಹೇಳಿದ್ದಾರೆ. ಇದರಿಂದ ಎಲ್ಲರಿಗೂ ನ್ಯಾಯಯುತವಾದ ಹಕ್ಕು ಸಿಗುತ್ತದೆ, ಇಲ್ಲಿಯವರೆಗೆ ಯಾರಿಗೂ ನ್ಯಾಯಯುತ ಹಕ್ಕು ಸಿಗುತ್ತಿರಲಿಲ್ಲ, ಈಗ ಜಾತಿ ಗಣತಿಗೆ ಸಂಬಂಧಿಸಿದಂತೆ ಮತ್ತಷ್ಟು ಕೆಲಸಗಳು ನಡೆಯಬೇಕಿದೆ. ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆದ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣದ ವಿಚಾರಣೆಗಾಗಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರೊಂದಿಗೆ ಪಾಟ್ನಾದಿಂದ ದೆಹಲಿಗೆ ಬಂದಿದ್ದಾರೆ.