ನವದೆಹಲಿ: ದೆಹಲಿ ಮದ್ಯದ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಕಾನೂನು ಸಭೆಗಳನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ದೆಹಲಿ ನ್ಯಾಯಾಲಯವು ವಜಾಗೊಳಿಸಿದೆ.
ತಮ್ಮ ಕಾನೂನು ಸಭೆಗಳನ್ನು ವಾರಕ್ಕೆ ಎರಡು ಬಾರಿ ಅಥವಾ ಐದು ಬಾರಿ ಹೆಚ್ಚಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕುರಿತಂತೆ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಏಪ್ರಿಲ್ 5ರಂದು ತಮ್ಮ ತೀರ್ಪನ್ನು ಕಾಯ್ದಿರಿಸಿದ ನಂತರ ಇದೀಗ ಅರ್ಜಿ ವಜಾಗೊಳಿಸಿದ್ದಾರೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಸಿಎಂ ವಿರುದ್ಧ 35ರಿಂದ 40 ಪ್ರಕರಣಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿಗೆ ಅರ್ಥಮಾಡಿಕೊಳ್ಳಲು ಮತ್ತು ಸೂಚನೆಗಳನ್ನು ನೀಡಲು ವಾರಕ್ಕೆ ಕೇವಲ ಎರಡೇ ಬಾರಿ ಅರ್ಧ ಗಂಟೆ ಕಾಲಾವಕಾಶ ನೀಡಿದರೆ ಸಾಲದು ಎಂದು ವಾದಿಸಿದರು. ಇದು ಅತ್ಯಂತ ಮೂಲಭೂತ ಹಕ್ಕು ಎಂದು ವಾದಿಸಿದರು ಅವರು, ಎಎಪಿ ಸಂಸದ ಸಂಜಯ್ ಸಿಂಗ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾಗ ವಾರಕ್ಕೆ ಮೂರು ಬಾರಿ ತಮ್ಮ ವಕೀಲರನ್ನು ಭೇಟಿ ಮಾಡಲು ಅನುಮತಿ ಪಡೆದ ಉದಾಹರಣೆಯೂ ಇದೆ ಎಂದು ಉಲ್ಲೇಖಿಸಿದರು.
ಕೇಜ್ರಿವಾಲ್ ಅವರ ಬಂಧನ ಮತ್ತು ನಂತರದ ಇಡಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತು,(ಏಜೆನ್ಸೀಸ್).