ನ್ಯೂಸ್

ಕಾರ್ಟನ್​ ಬಾಕ್ಸ್​ ನಡುವೆಯೇ ದೆಹಲಿ ಸಿಎಂ ಕರ್ತವ್ಯ! ಫೋಟೋ ಶೇರ್​ ಮಾಡಿ ಬಿಜೆಪಿಗೆ ಕೌಂಟರ್​ ಕೊಟ್ಟ ಎಎಪಿ | Atishi Marlena

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸಿವಿಲ್‌ ಲೈನ್ಸ್‌ ಪ್ರದೇಶದ ಫ್ಲ್ಯಾಗ್‌ಸ್ಟಾಫ್‌ ರಸ್ತೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೇನಾ ( Atishi Marlena ) ಅವರ ಅಧಿಕೃತ ನಿವಾಸದಿಂದ ಅವರಿಗೆ ಸೇರಿದ ವಸ್ತುಗಳನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಬಲವಂತವಾಗಿ ಹೊರ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ( AAP ) ಬುಧವಾರ (ಅ.09) ಆರೋಪಿಸಿದ್ದು, ಇದರ ಬೆನ್ನಲ್ಲೇ ಅತಿಶಿ ಅವರು ತಮ್ಮ ಕಲ್ಕಜಿ ನಿವಾಸದಿಂದ ಕಡತಗಳಿಗೆ ಸಹಿ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ? ಅತಿಶಿ ಅವರು ದೆಹಲಿಯ ಕಲ್ಕಜಿಯಲ್ಲಿರುವ ತಮ್ಮ ನಿವಾಸದ ಸೋಫಾ ಮೇಲೆ ಕುಳಿತು ಕಡತಗಳಿಗೆ ಸಹಿ ಹಾಕುತ್ತಿರುವುದು ಮತ್ತು ಅವರ ಸುತ್ತಲೂ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಪ್ಯಾಕ್​ ಮಾಡಿರುವ ಕಾರ್ಟನ್​ ಬಾಕ್ಸ್​ಗಳಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನು ಅತಿಶಿ ಅವರು ಕಡತಗಳಿಗೆ ಸಹಿ ಹಾಕುತ್ತಿರುವ ಫೋಟೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ದೆಹಲಿಯ ಜನರಿಗಾಗಿ ಕೆಲಸ ಮಾಡುವ ಅತಿಶಿ ಅವರ ಬದ್ಧತೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಸಕ್ತ ನವರಾತ್ರಿ ಉತ್ಸವದ ಸಂದರ್ಭದಲ್ಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಹಿಳಾ ಮುಖ್ಯಮಂತ್ರಿಯ ವಸ್ತುಗಳನ್ನು ಅವರ ಅಧಿಕೃತ ನಿವಾಸದಿಂದ ಹೊರಗೆ ಎಸದಿದೆ ಎಂದು ಸಂಜಯ್ ಆರೋಪಿಸಿದ್ದಾರೆ.

ಬಿಜೆಪಿಯು ಮುಖ್ಯಮಂತ್ರಿ ನಿವಾಸವನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಚುನಾಯಿತ ಮಹಿಳಾ ಮುಖ್ಯಮಂತ್ರಿ ಮತ್ತು ದೆಹಲಿಯ ಜನತೆಗೆ ಮಾಡಿದ ಘೋರ ಅಗೌರವವಾಗಿದೆ. 27 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿರುವ ಪಕ್ಷವೊಂದು ಬಲವಂತವಾಗಿ ಮುಖ್ಯಮಂತ್ರಿಯ ಮನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸಿಂಗ್ ಟೀಕಾ ಪ್ರಹಾರ ನಡೆಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಆದೇಶದಂತೆ ಆತಿಶಿ ಅವರಿಗೆ ಸಂಬಂಧಸಿದ ವಸ್ತುಗಳನ್ನು ಸರ್ಕಾರಿ ಬಂಗಲೆಯಿಂದ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಹೊರಗೆಸೆದಿದ್ದಾರೆ ಎಂದು ಸಂಜಯ್​ ಸಿಂಗ್​ ದೂರಿದ್ದಾರೆ.

ಎಎಪಿ, ಬಿಜೆಪಿ, ಮುಖ್ಯಮಂತ್ರಿ ಕಚೇರಿ (ಸಿಎಂಒ) ಮತ್ತು ಎಲ್‌ಜಿ ಕಚೇರಿಗಳು ಫ್ಲಾಗ್‌ಸ್ಟಾಫ್ ರಸ್ತೆ ಬಂಗಲೆಯನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಕಟುವಾದ ಆಪಾದನೆಯಲ್ಲಿ ತೊಡಗಿವೆ. ಬಂಗಲೆಯು ಮುಖ್ಯಮಂತ್ರಿಯವರ ನಿವಾಸವಾಗಿತ್ತು ಎಂದು ಎಎಪಿ ಹೇಳಿಕೊಂಡಿದೆ. ಇದನ್ನು ಕೇಜ್ರಿವಾಲ್ ಸರಿಯಾಗಿ ಖಾಲಿ ಮಾಡಿದರು ಮತ್ತು ಅದರ ಕೀಗಳನ್ನು ಪಿಡಬ್ಲ್ಯೂಡಿ ಅಧಿಕಾರಿಗಳು ನಂತರ ಅವರ ಉತ್ತರಾಧಿಕಾರಿ ಅತಿಶಿಗೆ ಹಸ್ತಾಂತರಿಸಿದರು ಎಂದಿದೆ. ಮತ್ತೊಂದೆಡೆ, ಎಲ್‌ಜಿ ಕಚೇರಿಯ ಮೂಲಗಳು ಫ್ಲಾಗ್‌ಸ್ಟಾಫ್ ರಸ್ತೆಯ ಬಂಗಲೆಯು ಮುಖ್ಯಮಂತ್ರಿಗಳ ಗೊತ್ತುಪಡಿಸಿದ ನಿವಾಸವಲ್ಲ ಮತ್ತು ಅದನ್ನು ಇನ್ನೂ ಅತಿಶಿ ಅವರಿಗೆ ಹಂಚಿಕೆ ಮಾಡಲಾಗಿಲ್ಲ ಎಂದು ಹೇಳಿಕೊಂಡಿದೆ.

ಎಎಪಿ ಮತ್ತು ಕೇಜ್ರಿವಾಲ್ ಬಂಗಲೆಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಂಗಲೆಯ ಸರಿಯಾದ ಹಸ್ತಾಂತರ ಮತ್ತು ಹೊಸದಾಗಿ ಹಂಚಿಕೆ ಮಾಡದೇ ಇರುವ ಕಾರಣ ಆತಿಶಿ ಅವರನ್ನು ಸ್ಥಳಾಂತರಿಸುವಂತೆ ಮಾಡಿದೆ ಎಂದು ಬಿಜೆಪಿ ಹೇಳಿದೆ. (ಏಜೆನ್ಸೀಸ್​)