ನ್ಯೂಸ್

FACT CHECK| ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್​ನ ಹೀನಾಯ ಸೋಲಿನ ನಂತರ ಸಂಸದ ರಾಹುಲ್​ಗಾಂಧಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಕೈಕುಲುಕಿದ್ದು ನಿಜವೆ?

ನವದೆಹಲಿ: ಸಂಸದ ರಾಹುಲ್​ ಗಾಂಧಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಕೈಕುಲುಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಶೂನ್ಯ ಸಾಧನೆ ಮಾಡಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲೂ ಕಾಂಗ್ರೆಸ್​ ಯುವ ಮುಖಂಡ ರಾಹುಲ್​ ಗಾಂಧಿ ಸೋಲು ಮರೆತು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಕಿರುನಗೆ ಬೀರಿ ಅಭಿನಂದಿಸುತ್ತಿದ್ದಾರೆ. ಇದನ್ನು ಸೋದರತ್ವ ಎಂದು ಕರೆಯಲಾಗುತ್ತದೆ ಎಂದು ಶೀರ್ಷಿಕೆ ಬರೆದು ಫೋಟೋವನ್ನು ಹಂಚಿಕೆ ಮಾಡಲಾಗಿದೆ.

ಫೇಸ್​ಬುಕ್​ ಬಳಕೆದಾರ ಅಜೀಮ್​ ಶೇಖ್​ ಎಂಬುವವರು ಹಿಂದಿ ಭಾಷೆಯಲ್ಲಿ ಶೀರ್ಷಿಕೆ ಬರೆದು ಫೋಟೋ ಅಪ್​ಲೋಡ್​ ಮಾಡಿದ್ದಾರೆ. ಇದನ್ನು ಸಾವಿರಕ್ಕೂ ಅಧಿಕ ಮಂದಿ ಫೇಸ್​ಬುಕ್​ ಬಳಕೆದಾರರು ಹಂಚಿಕೆ ಮಾಡಿದ್ದಾರೆ. ಆದರೆ ಈ ಫೋಟೋ ತುಂಬಾ ಹಳೆಯದು. ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದ ಚಿತ್ರ ಅಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ.

ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಟೋ ತುಂಬಾ ಹಳೆಯದು ಎಂದು ಕಂಡು ಹಿಡಿದಿದೆ. 2018ರ ಜನವರಿ 26ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ತೆಗೆದ ಚಿತ್ರ ಎಂಬುದನ್ನು ಖಚಿತಪಡಿಸಿದೆ.

2018 ರ ಜನವರಿ 26 ರಂದು ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್‌ನಲ್ಲಿ ನಡೆದ 'ಅಟ್ ಹೋಮ್' ಕಾರ್ಯಕ್ರಮದ ಸ್ವಾಗತದ ಸಂದರ್ಭದಲ್ಲಿ ಅಂದು ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಕೇಜ್ರಿವಾಲ್ ಅವರನ್ನು ಭೇಟಿಯಾದರು. ಆ ವೇಳೆ ಕ್ಲಿಕ್ಕಿಸಿದ ಚಿತ್ರ ಅದು.

2020ರ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಭೇಟಿಯಾದ ಸಂದರ್ಭದ ಚಿತ್ರ ಅಲ್ಲ. ಹೀಗಾಗಿ ವೈರಲ್​ ಆದ ಫೋಟೋ ತುಂಬಾ ಹಳೆಯದು ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)