ನ್ಯೂಸ್

ಈಶಾನ್ಯ ದೆಹಲಿ ಹಿಂಸಾಚಾರ: ಶಾಂತಿ ಕಾಪಾಡಲು ಸಿಎಂ ಕೇಜ್ರಿವಾಲ್ ಮನವಿ

ನವದೆಹಲಿ: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಗುಂಪು ಈಶಾನ್ಯ ದೆಹಲಿಯಲ್ಲಿ ಸೋಮವಾರ ಹಿಂಸಾಚಾರಕ್ಕೆ ಇಳಿದಿದ್ದು, ಹಲವರ ಪ್ರಾಣಿ ಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ. ಈ ಸನ್ನಿವೇಶ ನಮ್ಮಲ್ಲಿ ಖೇದವನ್ನು ಉಂಟುಮಾಡಿದೆ ಎಂದು ಹೇಳಿಕೊಂಡಿರುವ ಸಿಎಂ ಅರವಿಂದ ಕೇಜ್ರಿವಾಲ್, ಶಾಂತಿ ಕಾಪಾಡುವಂತೆ ದೆಹಲಿಯ ಜನರಲ್ಲಿ ಮನವಿ ಮಾಡಿದ್ದಾರೆ.

ಅನೇಕ ಪೊಲೀಸರು, ನಾಗರಿಕರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಅನೇಕ ಮನೆ, ಅಂಗಡಿ ಮುಂಗಟ್ಟುಗಳು ಬೆಂಕಿಗೆ ಆಹುತಿಯಾಗಿವೆ. ಇವೆಲ್ಲವೂ ದುರದೃಷ್ಟಕರ. ಹಿಂಸಾಚಾರ ನಡೆದಿರುವ ಭಾಗದ ಶಾಸಕರು ನನಗೆ ಕ್ಷಣ ಕ್ಷಣದ ಮಾಹಿತಿ ಒದಗಿಸುತ್ತಿದ್ದು, ಪೊಲೀಸ್ ಸಿಬ್ಬಂದಿ ಕೊರತೆ ಇರುವ ಕಡೆ, ಮೇಲಿನಿಂದ ಆದೇಶ ಬಂದ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಶಾಂತಿ ಪಾಲನೆಗಾಗಿ ಪೊಲೀಸರು, ಜಿಲ್ಲಾಧಿಕಾರಿಗಳಿಗೆ ಗಸ್ತು ಪರೇಡ್ ಏರ್ಪಡಿಸುವಂತೆ ಸೂಚಿಸಿದ್ದೇನೆ. ಎಲ್ಲ ಆಸ್ಪತ್ರೆಗಳಲ್ಲೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ತುರ್ತು ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ. ಅಗ್ನಿಶಾಮಕ ಸೇವೆಯನ್ನೂ ಅಲರ್ಟ್​ ಆಗಿ ಇರಿಸಲಾಗಿದೆ ಎಂದ ಕೇಜ್ರಿವಾಲ್​, ಹಿಂಸಾಚಾರದಲ್ಲಿ ತೊಡಗಿರುವ ಜನ ಹೊರಗಿನಿಂದ ಬಂದವರು ಎಂದು ಶಾಸಕರು ಹೇಳಿದ್ದಾರೆ. ಹೀಗಾಗಿ ಗಡಿ ಮುಚ್ಚದೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ಕೊಡಲಾಗಿದೆ ಎಂದರು.

ಈಗ ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗಿನ ಸಭೆಯಲ್ಲಿ ಈಶಾನ್ಯ ದೆಹಲಿಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಮುಂದಿನ ಕ್ರಮಕ್ಕೂ ಸರ್ಕಾರ ಮುಂದಾಗಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)