ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಕಟ್ಟಡ ಕುಸಿತ 
ನ್ಯೂಸ್

ದೆಹಲಿ ಕಟ್ಟಡ ಕುಸಿತ: ಅವಶೇಷಗಳಡಿ ಸಿಲುಕಿ ‘ಉಸಿರಾಡೋಕೆ ಆಗ್ತಿಲ್ಲ’ ಎಂದ 4 ತಿಂಗಳ ಗರ್ಭಿಣಿ | Delhi Building Collapse

ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿದ್ದಾರೆ. 4 ತಿಂಗಳ ಗರ್ಭಿಣಿ ಸೇರಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ.

Delhi Seemapuri Building Collapse: ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಐದು ಅಂತಸ್ತಿನ ವಸತಿ ಕಟ್ಟಡ ಕುಸಿದು ಭಾರೀ ಆತಂಕ ಸೃಷ್ಟಿಯಾಗಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 4 ತಿಂಗಳ ಗರ್ಭಿಣಿ ಹಾಗೂ ಆಕೆಯ 4 ವರ್ಷದ ಮಗಳೂ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಶಹದಾರಾ ಜಿಲ್ಲೆಯ ನ್ಯೂ ಸೀಮಾಪುರಿಯ ಇ-ಬ್ಲಾಕ್‌ನಲ್ಲಿ ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದುಬಿದ್ದಿದೆ. ಕಟ್ಟಡ ಕುಸಿದ ರಭಸಕ್ಕೆ ಪಕ್ಕದ ಎರಡು ಕಟ್ಟಡಗಳಿಗೂ ಹಾನಿಯಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಓಡಿಬಂದು ರಕ್ಷಣಾ ಕಾರ್ಯ ಶುರು ಮಾಡಿದ್ದಾರೆ.

‘ಅವಳು 4 ತಿಂಗಳ ಗರ್ಭಿಣಿ’

ಸಮೀನಾ (30) ಅವರ ಸಹೋದರಿ ಗುಲ್ಫಿಷಾ (21) ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. 4 ತಿಂಗಳ ಗರ್ಭಿಣಿಯಾಗಿರುವ ಗುಲ್ಫಿಷಾ, ಅವಶೇಷಗಳಡಿಯಿಂದಲೇ ಕರೆ ಮಾಡಿ ತಾನು ಸಿಲುಕಿಕೊಂಡಿದ್ದು ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಅವರ 4 ವರ್ಷದ ಮಗಳು ಹಾಗೂ ಕಟ್ಟಡ ಮಾಲೀಕರ ಮಗಳೂ ಅವರ ಜೊತೆಗಿದ್ದಾರೆ ಎಂದು ಸಮೀನಾ ತಿಳಿಸಿದ್ದಾರೆ. ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈದ್ಗಾ ಆವರಣದ ಕಡೆಯಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

ನನ್ನ ತಾಯಿ ಅವಶೇಷಗಳಡಿ ಸಿಲುಕಿದ್ದಾರೆ

ಹಸೀನಾ (42) ಅವರು ತಮ್ಮ ತಾಯಿಯೂ ಅವಶೇಷಗಳಡಿ ಸಿಲುಕಿರುವ ಆತಂಕ ವ್ಯಕ್ತಪಡಿಸಿದ್ದಾರೆ. ಕಟ್ಟಡ ಕುಸಿದಾಗ ತಮ್ಮ ತಾಯಿ ರಸ್ತೆ ದಾಟುತ್ತಿದ್ದರು. ಅವರ ತಂದೆ ಅದಕ್ಕೂ ಸ್ವಲ್ಪ ಮುಂದೆ ಹೋಗಿದ್ದರು ಎಂದು ಹಸೀನಾ ಹೇಳಿದ್ದಾರೆ.

ಪಕ್ಕದ ಕಟ್ಟಡ ಕೆಡವಿದ್ದರಿಂದಲೇ ದುರಂತ?

ಕಟ್ಟಡದ ಮಾಲೀಕರ ಸಂಬಂಧಿ ಮೊಹಮ್ಮದ್ ಅಕ್ಬರ್ (33) ಅವರ ಪ್ರಕಾರ, ನಾಲ್ಕು ಮಹಡಿಗಳಲ್ಲೂ ಕುಟುಂಬದವರೇ ವಾಸವಾಗಿದ್ದರು. ಕುಟುಂಬದ ಮೂವರು ಹಾಗೂ ಅಕ್ಕನ ಮಗಳು ಸೇರಿದಂತೆ ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು, ಮಾಲೀಕರ ಮಗಳು ಅಮೀನಾ, ಪಕ್ಕದ ಕಟ್ಟಡವನ್ನು ಕಳೆದ 5–6 ದಿನಗಳಿಂದ ಯಂತ್ರ ಬಳಸಿ ಕೆಡವಲಾಗುತ್ತಿತ್ತು ಎಂದು ಹೇಳಿದ್ದಾರೆ. ಇದರಿಂದ ತಮ್ಮ ಕಟ್ಟಡಕ್ಕೂ ಹಾನಿಯಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಈ ಕಟ್ಟಡ ನಿರ್ಮಿಸಿ ಕುಟುಂಬ ವಾಸಕ್ಕೆ ಬಂದಿತ್ತು ಎಂದು ಅಮೀನಾ ತಿಳಿಸಿದ್ದಾರೆ.

8 ಮಂದಿ ಆಸ್ಪತ್ರೆಗೆ ದಾಖಲು

ಕಟ್ಟಡ ಕುಸಿದ ಬಳಿಕ ರಕ್ಷಣಾ ಸಿಬ್ಬಂದಿ 8 ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆ ಹಾಗೂ 3 ವರ್ಷದ ಮಗು ಕೂಡ ಇದ್ದಾರೆ. ಉಳಿದವರು ಪುರುಷರು. ಕಟ್ಟಡದ ಮಾಲೀಕ ಅನ್ವರ್, ಅವರ ಪತ್ನಿ ಸಲ್ಮಾ, ಮಗ ಅಬ್ದುರ್ ರೆಹಮಾನ್, 3 ವರ್ಷದ ಅಬ್ದಾನ್ ಹಾಗೂ ಬಾಡಿಗೆದಾರ ಸಕೀನಾ ಗಾಯಗೊಂಡವರಲ್ಲಿ ಸೇರಿದ್ದಾರೆ. ಗಾಯಾಳುಗಳನ್ನು ಜಿಟಿಬಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಸದ್ಯ ಈ ವಿಭಾಗ ರಾಜೀವ್ ಗಾಂಧಿ ಆಸ್ಪತ್ರೆ ಆವರಣದಿಂದ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಇಂದಿಗೂ ಕೇವಲ 1 ರೂ.ಗೆ ಇಡ್ಲಿ; 85ರ ‘ಇಡ್ಲಿ ಅಮ್ಮ’ನ ಕಥೆ ಕೇಳಿದ್ರೆ ನೀವು ಕೂಡ ಫಿದಾ ಆಗ್ತೀರಾ! | One-rupee idli

ಮುಂದುವರಿದ ರಕ್ಷಣಾ ಕಾರ್ಯ

ಕಟ್ಟಡ ಕುಸಿದ ಬಗ್ಗೆ ಮಧ್ಯಾಹ್ನ ಸುಮಾರು 3.30ಕ್ಕೆ ದೆಹಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿದೆ. ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬಳಿಕ ರಕ್ಷಣಾ ಕಾರ್ಯಕ್ಕೆ ನೆರವಾಗಲು ಎನ್‌ಡಿಆರ್‌ಎಫ್ ತಂಡವನ್ನೂ ಕರೆಸಲಾಗಿದೆ. ಸದ್ಯ ಅವಶೇಷಗಳಡಿ ಇನ್ನೂ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್)