ನವದೆಹಲಿ: ದೇಶದ ಐಕಾನಿಕ್ ಸ್ಥಳವೆಂದೇ ಹೆಸರಾಗಿರುವ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದ ತನಿಖೆಯಲ್ಲಿ ಅನೇಕ ಆಘಾತಕಾರಿ ಸಂಗತಿ ಬೆಳಕಿಗೆ ಬರುತ್ತಲೇ ಇವೆ. ಉಗ್ರರ ಟಾರ್ಗೆಟ್ ಕೇವಲ ಒಂದು ಪ್ರದೇಶ ಮಾತ್ರ ಆಗಿರಲಿಲ್ಲ ಸುಮಾರು 6 ಸ್ಥಳಗಳಲ್ಲಿ ಭೀಕರ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.
ಶಾಕಿಂಗ್ ವಿಚಾರ ಏನೆಂದರೆ, ಈ ಸಂಚಿನಲ್ಲಿ ಭಾಗಿಯಾದ ಯಾರೊಬ್ಬರು ಅನಕ್ಷರಸ್ಥರಲ್ಲ, ಅವರೆಲ್ಲ ವೈದ್ಯರು. ಇದೊಂದು ವೈಟ್ ಕಾಲರ್ ಟೆರರ್ ಮಾಡ್ಯೂಲ್. ಇದರ ಹಿಂದಿರುವ ಕೈವಾಡ ಯಾರದ್ದು ಅಂದರೆ, ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್. ಡಿಸೆಂಬರ್ 6 ರಂದು ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್ಸಿಆರ್) ನಲ್ಲಿ ಸುಮಾರು 6 ಕಡೆ ದಾಳಿ ಮಾಡಲು ಈ ಗುಂಪು ಭಾರಿ ಸಂಚು ರೂಪಿಸಿತ್ತು.
ಅಂದಹಾಗೆ, ಡಿಸೆಂಬರ್ 6 ಅನ್ನೇ ಏಕೆ ಆಯ್ದುಕೊಂಡಿದ್ದರು ಗೊತ್ತಾ? ಏಕೆಂದರೆ, 1992 ರಲ್ಲಿ ಇದೇ ದಿನದಂದು ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ದೆಹಲಿ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿರುವ ಶಂಕಿತ ಉಗ್ರರು ಈ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಬಾಬರಿ ಮಸೀದಿ ಕೆಡವಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ಮಾಡಿದ್ದಾಗಿ ತಿಳಿಸಿದ್ದಾರೆ.
ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ಗುಂಪಿನ ಸದಸ್ಯರು ವಿಚಾರಣೆಯ ಸಮಯದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಅಂದರೆ, ಎನ್ಸಿಆರ್ನಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಹಂತವಾರು ಯೋಜನೆಯನ್ನು ರೆಡಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಆ ಯೋಜನೆಗಳಲ್ಲಿ ಐದು ಹಂತದ ಯೋಜನೆಯನ್ನು ತನಿಖಾಧಿಕಾರಿಗಳು ವಿವರವಾಗಿ ಹಂಚಿಕೊಂಡಿದ್ದಾರೆ.
ಮೊದಲನೇ ಹಂತ: ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ ಭಯೋತ್ಪಾದಕ ಮಾಡ್ಯೂಲ್ ರಚನೆ ಮಾಡುವುದು.
ಎರಡನೇ ಹಂತ: ಹರಿಯಾಣದ ನುಹ್ ಮತ್ತು ಗುರುಗ್ರಾಮ್‌ನಿಂದ ಪಡೆದ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಜೋಡಿಸಲು ಮತ್ತು ಮದ್ದುಗುಂಡುಗಳನ್ನು ಜೋಡಿಸಲು ಕಚ್ಚಾ ವಸ್ತುಗಳ ಖರೀದಿ ಮಾಡುವುದು.
ಮೂರನೇ ಹಂತ: ಮಾರಕ ರಾಸಾಯನಿಕ ಐಇಡಿಗಳನ್ನು ತಯಾರಿಸುವುದು ಮತ್ತು ಸಂಭಾವ್ಯ ಗುರಿ ಸ್ಥಳಗಳನ್ನು ಪರಿಶೀಲಿಸುವುದು.
ನಾಲ್ಕನೇ ಹಂತ: ಟಾರ್ಗೆಟ್ ಸ್ಥಳವನ್ನು ಅನ್ವೇಷಿಸಿದ ಬಳಿಕ ಮಾಡ್ಯೂಲ್‌ನ ಸದಸ್ಯರಿಗೆ ರೆಡಿ ಮಾಡಿದ ಬಾಂಬ್‌ಗಳನ್ನು ವಿತರಿಸುವುದು.
ಐದನೇ ಹಾಗೂ ಕೊನೆಯ ಹಂತ: ದೆಹಲಿಯ ಆರರಿಂದ ಏಳು ಸ್ಥಳಗಳಲ್ಲಿ ಸಂಘಟಿತ ಬಾಂಬ್ ದಾಳಿಗಳನ್ನು ನಡೆಸುವುದು.
ಆರಂಭದ ಪ್ಲಾನ್ ಏನಾಗಿತ್ತು ಅಂದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬಾಂಬ್ ದಾಳಿಗಳನ್ನು ನಡೆಸುವುದಾಗಿತ್ತು. ಆದರೆ, ಅದು ತಡವಾದ್ದರಿಂದ ಬೇರೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಂತಿಮವಾಗಿ ಬಾಬ್ರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು.
16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬರಿ ಮಸೀದಿಯನ್ನು ರಾಮನ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. 1992ರ ಡಿಸೆಂಬರ್ 6ರಂದು ಗುಂಪೊಂದು ಈ ಕಟ್ಟಡವನ್ನು ಕೆಡವಿತು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘವಾದ ಹೋರಾಟದ ನಂತರ, ಅದೇ ಸ್ಥಳದಲ್ಲಿ ಹೊಸ ರಾಮ ಮಂದಿರವನ್ನು ನಿರ್ಮಿಸಲಾಯಿತು. ಈ ನಿರ್ಮಾಣ ಕಾರ್ಯವು 2020ರಲ್ಲಿ ಪ್ರಾರಂಭವಾಗಿ, ಈ ವರ್ಷ ಕೊನೆಗೊಂಡಿತು. ರಾಮ ಮಂದಿರ ವಿಚಾರದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆ ಬಹಳ ದಿನಗಳಿಂದ ಬೆದರಿಕೆಗಳನ್ನು ಹಾಕುತ್ತಾ ಬಂದಿದ್ದು, ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಕರೆ ನೀಡುತ್ತಾ ಬರುತ್ತಿದೆ. ಈ ವಿಚಾರವನ್ನು ಅನೇಕ ಬಾರಿ ಗುಪ್ತಚರ ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ಅಲ್ಲದೆ, ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ತನ್ನ ಅಂಕಣಗಳಲ್ಲಿ ಅಯೋಧ್ಯೆಯನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.
ಅಂದಹಾಗೆ, ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್ನಲ್ಲಿ ಸೋಮವಾರ (ನ.10) ಕಾರು ಸ್ಫೋಟಗೊಂಡು ಒಂಬತ್ತು ಜನರು ಸಾವಿಗೀಡಾದರು. ಅಲ್ಲದೆ, ಈ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡರು. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ವೈದ್ಯ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿ ಈ ಕಾರನ್ನು ಚಲಾಯಿಸುತ್ತಿದ್ದನು. ಫರಿದಾಬಾದ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಸಮಯದಲ್ಲಿ ಅಮೋನಿಯಂ ನೈಟ್ರೇಟ್ ಎಂದು ನಂಬಲಾದ 2,900 ಕೆಜಿ ಸ್ಫೋಟಕ ವಸ್ತು ಪತ್ತೆಯಾಯಿತು. ಈ ಪ್ರಕರಣದಲ್ಲಿ ವೈದ್ಯರಾದ ಮುಜಮ್ಮಿಲ್ ಶೇಖ್ ಮತ್ತು ಶಾಹೀನ್ ಸಯೀದ್ ಅವರನ್ನು ಬಂಧಿಸಿದ ಬಳಿಕ ಸೋಮವಾರ ಸಂಜೆ ಈ ಸ್ಫೋಟ ಸಂಭವಿಸಿದೆ. ಈ ವೈದ್ಯರು ಜೈಶ್‌ನ ಹೊಸದಾಗಿ ರಚಿಸಲಾದ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ಒಳಗೊಂಡ ಭಯೋತ್ಪಾದಕ ಸಂಘಟನೆಯ ಭಾಗವೆಂದು ಶಂಕಿಸಲಾಗಿದೆ.
ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೃಹತ್ ದಾಳಿ ನಡೆಸಲು ಭಾರಿ ಸಂಚು ರೂಪಿಸಲಾಗಿತ್ತು. ಆ ಸಂಚನ್ನು ಕಾರ್ಯಗತಗೊಳಿಸಲು ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ತನ್ನ ಸಹಚರರನ್ನು ಬಂಧಿಸಿದ ಹತಾಶೆಯಿಂದ ಹಾಗೂ ಭಯದಿಂದ ಉಮರ್ ಕಾರು ಸ್ಫೋಟಿಸಿದ್ದಾನೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)