ನವದೆಹಲಿ: ಇಂದು ಪ್ರೇಮಿಗಳ ದಿನ. ಜಗತ್ತಿನಾದ್ಯಂತ ಪ್ರೇಮಿಗಳು ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡು, ಉಡುಗೊರೆಗಳನ್ನು ಕೊಟ್ಟುಕೊಂಡು ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸುದಿನದಂದು ನಾಲ್ಕೈದು ಪ್ರೇಮಿಗಳನ್ನು ಹೊಂದಿರುವ ದೆಹಲಿ ವಿಮಾನ ನಿಲ್ದಾಣವು ತನ್ನ ಟ್ವಿಟ್ಟರ್ ಖಾತೆಯಲ್ಲಿ ತನ್ನೆಲ್ಲ ಪ್ರೇಮಿಗಳಿಗೆ ವಿಶೇಷವಾಗಿ ಶುಭ ಹಾರೈಸಿದೆ.
ಟ್ವಿಟ್ಟರ್ನಲ್ಲಿ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿದ ದೆಹಲಿ ಏರ್ಪೋರ್ಟ್ ತನ್ನ ಪ್ರೇಮಿಗಳಾದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ ಸಂಸ್ಥೆಗಳಿಗೆ ಶುಭ ಹಾರೈಸಿದೆ. ನನ್ನ ಜತೆ ಎಂದಿಗೂ ಹೀಗೇ ಇರುವೆಯಾ? ನನ್ನೊಂದಿಗೆ ಹಾರಾಟ ಮುಂದುವರಿಸುವೆಯಾ ಎನ್ನುವಂತಹ ಪ್ರಶ್ನೆಗಳನ್ನು ಏರ್ಲೈನ್ಗಳಿಗೆ ಕೇಳಿದೆ.
ಇಂಡಿಗೋ ಏರ್ಇಂಡಿಯಾಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿರುವ ದೆಹಲಿ ಏರ್ಪೋರ್ಟ್, "ನೀನು ಎಂದೆಂದಿಗೂ ನನ್ನ ಮೊದಲ ಪ್ರೀತಿ. ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಏರ್ಇಂಡಿಯಾ, "ನಿನ್ನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವುದಕ್ಕೆ ಹೆಮ್ಮೆಯೆನಿಸುತ್ತದೆ" ಎಂದು ಮರುಟ್ವೀಟ್ ಮಾಡಿದೆ.
ಇಂಡಿಗೋಗೆ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿರುವ ದೆಹಲಿ ಏರ್ಪೋರ್ಟ್, "ನೀನು ನನ್ನ ರನ್ವೇ ಬಿಟ್ಟು ಎಂದೂ ಓಡಿ ಹೋಗುವುದಿಲ್ಲ ಎಂದು ಪ್ರಮಾಣ ಮಾಡು" ಎಂದು ಕೇಳಿಕೊಂಡಿದೆ.
"ಪ್ರೇಮಿಗಳ ದಿನದ ಶುಭಾಷಯಗಳು. ನಮ್ಮ ಜತೆ ಇನ್ನೂ ಎತ್ತರಕ್ಕೆ ಹಾರುತ್ತೀಯಲ್ಲವೇ?" ಎಂದು ದೆಹಲಿ ಏರ್ಪೋರ್ಟ್ ವಿಸ್ತಾರ್ ಏರ್ಲೈನ್ನನ್ನು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಏರ್ಲೈನ್, "ನನ್ನೆಲ್ಲ ವಿಮಾನಗಳು ನಿನಗೆ ಧನ್ಯವಾದ ಹೇಳುತ್ತವೆ" ಎಂದು ಟ್ವೀಟ್ ಮಾಡಿದೆ. ಇಲ್ಲಿಗೆ ಈ ಪ್ರೇಮ ಸಂಭಾಷಣೆ ಮುಗಿಯದೆ, ದೆಹಲಿ ಏರ್ಪೋರ್ಟ್ "ಧನ್ಯವಾದಗಳು ಏಕೆ? ನಾವು ನಿನ್ನೊಂದಿಗೆ ಹೊಸ ಭಾವನೆಯನ್ನು ಹೊಂದುತ್ತಿದ್ದೇವೆ. ಈ ಭಾವನೆ ಎಂದಿಗೂ ಹಳೆಯದಾಗುವುದಿಲ್ಲ. ನಮ್ಮ ಜತೆ ಹಾರಿ ಬರುವೆಯಲ್ಲವೇ?" ಎಂದು ಕೇಳಿದೆ. ದೆಹಲಿ ಏರ್ಪೋರ್ಟ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರುವ ವಿಸ್ತಾರ ಏರ್ಲೈನ್, ಇದೊಂದು ಪ್ಲ್ಯಾನ್ ರೂಪದಲ್ಲಿ ಕಾಣುತ್ತಿದೆ. ನಾನು ನೇರಳೆ ಬಣ್ಣದ ಬಟ್ಟೆ ಧರಿಸಿ ಬರುವೆ ಎಂದು ತಿಳಿಸಿದೆ.
ಕೊನೆಯಲ್ಲಿ ಸ್ಪೈಸ್ ಜೆಟ್ ಏರ್ಲೈನ್ನೊಂದಿಗೆ ಪ್ರೀತಿ ಹಂಚಿಕೊಂಡಿರುವ ಏರ್ಪೋರ್ಟ್, "ನೀನು ನನ್ನನ್ನು ಕೆಂಪಗಾಗಿಸಿದ ಬಗೆ ನನಗೆ ಇಷ್ಟವಾಯಿತು. ಹಾಟ್ ಎಂಡ್ ಸ್ಪೈಸಿ!" ಎಂದು ಟ್ವೀಟ್ ಮಾಡಿದೆ.
ಏರ್ಲೈನ್ಗಳ ಜತೆಯಲ್ಲಿ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯಾದ ದೆಹಲಿ ಡ್ಯೂಟಿ ಫ್ರೀನೊಂದಿಗೂ ಸಹ ದೆಹಲಿ ಏರ್ಪೋರ್ಟ್ ತನ್ನ ಪ್ರೀತಿಯನ್ನು ಹಂಚಿಕೊಂಡಿದೆ. (ಏಜೆನ್ಸೀಸ್)