ನ್ಯೂಸ್

ಪೂರ್ವ ದೆಹಲಿಯಲ್ಲಿ 17 ಕಾರುಗಳು ಸುಟ್ಟು ಭಸ್ಮ.. ಚಾಂದಿನಿ ಚೌಕ್‌ನಲ್ಲಿ 5 ಅಂಗಡಿಗಳಿಗೆ ಬೆಂಕಿ!

ನವದೆಹಲಿ: ಪೂರ್ವದೆಹಲಿಯ ಮಧು ವಿಹಾರ್ ಪ್ರದೇಶದಲ್ಲಿ ನಾಗರಿಕ ಪ್ರಾಧಿಕಾರ ನಡೆಸುತ್ತಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ಸಂಭವಿಸಿದ ಬೆಂಕಿಯಿಂದ 17 ಕಾರುಗಳು ಸುಟ್ಟು ಭಸ್ಮವಾಗಿವೆ.

ಮಧ್ಯರಾತ್ರಿ 1.17ಕ್ಕೆ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸುದ್ದಿ ತಿಳಿದ ಕೂಡಲೇ ಒಂಬತ್ತು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಲ್ಕು ಗಂಟೆಗಳಲ್ಲಿ ಬೆಂಕಿಯನ್ನು ನಿಯಂತ್ರಿಸಿದರು ಎಂದು ದೆಹಲಿ ಅಗ್ನಿಶಾಮಕ ಸೇವೆಯ (ಡಿಎಫ್‌ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರುಗಳು ಸ್ಥಳೀಯರಿಗೆ ಸೇರಿದ್ದು, ಅವರು ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಬಾಡಿಗೆ ಆಧಾರದ ಮೇಲೆ ನಿಲ್ಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಯುವಿ ಸೇರಿದಂತೆ 17 ಕಾರುಗಳು ಬೆಂಕಿಯಲ್ಲಿ ಹಾನಿಗೊಳಗಾಗಿವೆ.

ಕೆಲವು ವಾಹನಗಳಿಗೆ ಹಾನಿಯಾಗಿದೆ ಆದರೆ ಉಳಿದವುಗಳನ್ನು ನಾವು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಡಿಎಫ್‌ಎಸ್ ಅಧಿಕಾರಿ ಯಶವಂತ್ ಮೀನಾ ತಿಳಿಸಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿನ ಹುಲ್ಲು ಮತ್ತು ಪೊದೆಗಳಿಗೆ ಬೆಂಕಿ ತಗಲಿದ ಪರಿಣಾಮವಾಗಿ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದರು.

5ಅಂಗಡಿಗೆ ಬೆಂಕಿ: ಮತ್ತೊಂದು ಘಟನೆಯಲ್ಲಿ, ಉತ್ತರ ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಬೆಂಕಿಯಲ್ಲಿ ಐದು ಅಂಗಡಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಫತೇಪುರಿ ಮಸೀದಿ ಬಳಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮುಂಜಾನೆ 3.12 ಕ್ಕೆ ಕರೆ ಬಂದಿತು. ಎಂಟು ಅಗ್ನಿಶಾಮಕ ದಳವಾಹನಗಳೊಂದಿಗೆ ಸಿಬ್ಬಂದಿಯನ್ನು ಕಳೂಹಿಸಿ ಮುಂಜಾನೆ 5 ಗಂಟೆಗೆ ಬೆಂಕಿ ನಂದಿಸಲಾಯಿತು ಎಂದು ಡಿಎಫ್‌ಎಸ್ ಅಧಿಕಾರಿ ಹೇಳಿದರು.

ರಾಷ್ಟ್ರರಾಜಧಾನಿಯಲ್ಲಿ ಬಿಸಿಲಿನ ತಾಪ ಏರಿಕೆಯಾಗಿದ್ದು, ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪಾರ್ಕಿಂಗ್ ಗುತ್ತಿಗೆದಾರರಿಗೆ ತಕ್ಷಣದ ಸೂಚನೆಗಳನ್ನು ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.