ನ್ಯೂಸ್

ನಮ್ಮ ಕನಸುಗಳಿಗೆ ಸಾವು! ವರ್ಷಗಳ ಪರಿಶ್ರಮಕ್ಕೆ ಫಲದ ಭರವಸೆ, ನಿರೀಕ್ಷೆಯೇ ಇಲ್ಲ | Delayed Exams

ಮೋಹನ್​ ಶೆಟ್ಟಿ

Delayed Exams: ಮಧ್ಯಪ್ರದೇಶ ಸರ್ಕಾರವು ಆಯೋಜಿಸುವ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ಬಡ ವರ್ಗದ ಅಭ್ಯರ್ಥಿಗಳು, ಸರ್ಕಾರಿ ನೌಕರಿ ಪಡೆಯುವ ನೂರಾರು ಕನಸ ಕಂಡು, ಹಗಲು-ರಾತ್ರಿ ಎಂದು ನೋಡದೆ, ನಿರಂತರವಾಗಿ ಶ್ರಮಿಸುತ್ತಿದ್ದರೂ ಪರೀಕ್ಷೆ ಬರೆದು, ಫಲಿತಾಂಶಕ್ಕೆ ಕಾಯುವ ಮಾತಿಗಿಂತ ಪರೀಕ್ಷೆ ಬರೆಯುವುದೇ ದೊಡ್ಡ ಕನಸು ಎನ್ನುವಂತ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ನೇರ ಹೊಣೆ ಸರ್ಕಾರ. ಪರೀಕ್ಷೆಗಳನ್ನು ಆಯೋಜಿಸುವಲ್ಲಿ ನಿರಂತರ ವಿಳಂಬ ಮಾಡುತ್ತಿರುವ ಹಿನ್ನಲೆ 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತಾ ವಯೋಮಿತಿಯನ್ನು ದಾಟುತ್ತಿದ್ದಾರೆ. ಇದರಿಂದ ತಮ್ಮ ಆಸೆ, ಕನಸು ಛಿದ್ರಗೊಂಡಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಮಧ್ಯಪ್ರದೇಶದ ಉದ್ಯೋಗಿಗಳ ಆಯ್ಕೆ ಮಂಡಳಿ (ಇಎಸ್‌ಬಿ) ಈ ವರ್ಷದ ನವೆಂಬರ್‌ನೊಳಗೆ ಎಂಟು ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿತ್ತು. ಆದರೆ, ಇಲ್ಲಿಯವರೆಗೆ ಕೇವಲ ಎರಡನ್ನು ಮಾತ್ರ ನಡೆಸಲಾಗಿದ್ದು, ಅಭ್ಯರ್ಥಿಗಳ ಹತಾಶೆ, ಆತಂಕವನ್ನು ಹೆಚ್ಚಿಸಿದೆ. ಉದಾಹರಣೆಗೆ ಸಬ್ಇನ್‌ಸ್ಪೆಕ್ಟರ್ ಮತ್ತು ಮಹಿಳಾ ಮೇಲ್ವಿಚಾರಕರ ಪರೀಕ್ಷೆಗಳು 2017ರಿಂದ ನಡೆದಿಲ್ಲ. 1937ರ ಪರೀಕ್ಷಾ ಕಾಯಿದೆ ಅಡಿಯಲ್ಲಿ, ನೇಮಕಾತಿ ಪರೀಕ್ಷೆಗಳನ್ನು ವಾರ್ಷಿಕವಾಗಿ ನಡೆಸಬೇಕು. ಆದರೆ, ಇಲ್ಲಿ ಅದ್ಯಾವುದು ಕ್ರಮೇಣವಾಗಿ ನಡೆದಿಲ್ಲ ಎಂಬುದು ಪರೀಕ್ಷಾ ಅಭ್ಯರ್ಥಿಗಳ ಆರೋಪ.

26 ಲಕ್ಷ ನೋಂದಾಯಿತ ನಿರುದ್ಯೋಗಿಗಳು

ಕೇವಲ ಪರೀಕ್ಷೆಗಳು ಮಾತ್ರ ನಡೆಯದೆ, ಬಾಕಿ ಉಳಿದಿಲ್ಲ. ಸಬ್ ಇಂಜಿನಿಯರ್‌ಗಳು ಮತ್ತು ಫಾರೆಸ್ಟ್ ಗಾರ್ಡ್‌ಗಳು ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳ ಫಲಿತಾಂಶಗಳು 2023ರಿಂದಲೂ ಬಾಕಿ ಉಳಿದಿವೆ. ಇದು ಎರಡು ಲಕ್ಷ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 26 ಲಕ್ಷ ನೋಂದಾಯಿತ ನಿರುದ್ಯೋಗಿ ಯುವಕರನ್ನು ಹೊಂದಿರುವ ರಾಜ್ಯ ಸರ್ಕಾರವು ವಿಳಂಬವನ್ನು ಪರಿಹರಿಸಲು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದ್ದೇ ಆದರೂ ತ್ವರಿತವಾಗಿ ತೆಗೆದುಕೊಳ್ಳಬೇಕಾದ ಕ್ರಮವನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ ಎಂಬ ಆರೋಪವು ಇದೆ.

ಗೌತಮ್ ಅಳಲು

ಸತ್ನಾದ ಗೌತಮ್ ಎಂಬ ಅಭ್ಯರ್ಥಿ, 2017ರಲ್ಲಿ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಪರೀಕ್ಷೆಗೆ ತಯಾರಿ ನಡೆಸಲು ಭೋಪಾಲ್‌ಗೆ ಬಂದಿದ್ದರು. ಆ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಹಿನ್ನಲೆ, ಊರಿಗೆ ವಾಪಾಸ್​ ಹೋಗಲಾಗದೆ, ನಗರದಲ್ಲಿಯೇ ಉಳಿದು, ತಮ್ಮ ಅಧ್ಯಯನವನ್ನು ಮುಂದುವರಿಸಲು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಇದ್ದಾರೆ. "ಇಲ್ಲಿಯವರೆಗೂ ಪರೀಕ್ಷೆ ನಡೆಯದೆ ಇರುವುದು  ಆತಂಕ ಮೂಡಿಸಿದೆ. ವಯಸ್ಸು ಮುಂದೋಗುತ್ತಿದೆಯೇ ವಿನಃ ಪರೀಕ್ಷೆ ಮಾತ್ರ ನಡೆದಿಲ್ಲ. ವರ್ಷಗಳ ಕಠಿಣ ಪರಿಶ್ರಮ ನೀರಲ್ಲಿ ಹೋಮ ಮಾಡಿದಂತೆ ಆಗುತ್ತಿದೆ" ಎಂದು ಗೌತಮ್ ಅಳಲು ತೋಡಿಕೊಂಡಿದ್ದಾರೆ. ಇವರೊಂದಿಗೆ ಇನ್ನೂ ಅನೇಕ ವಿದ್ಯಾರ್ಥಿಗಳು ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).