ಬೆಂಗಳೂರು: ಕೆಎಸ್ಆರ್ಟಿಸಿ ಭದ್ರತಾ ರಕ್ಷಕ ದರ್ಜೆ-3ರ ಹುದ್ದೆಗಳಿಗಾಗಿ ಪರೀಕ್ಷೆ ಬರೆದು 3 ವರ್ಷ ಕಳೆದರೂ ಅಂತಿಮ ಆಯ್ಕೆ ಪಟ್ಟಿ ಇರಲಿ, ಕನಿಷ್ಠ ಕಟ್ ಆಫ್ ಅಂಕಗಳೂ ಬಿಡುಗಡೆ ಆಗಿಲ್ಲ. ಇದರಿಂದ ಇಂದಲ್ಲ, ನಾಳೆ ಉದ್ಯೋಗ ಸಿಗುವ ಭರವಸೆಯಲ್ಲಿ ಪರೀಕ್ಷೆ ಬರೆದಿರುವ ಸಾವಿರಾರು ಅಭ್ಯರ್ಥಿಗಳು ಕತ್ತಲಲ್ಲಿ ದಿನದೂಡುತ್ತಿದ್ದಾರೆ. ಕೆಎಸ್ಸಾರ್ಟಿಸಿ ಭದ್ರತಾ ರಕ್ಷಕ ದರ್ಜೆ-3 ಶ್ರೇಣಿಯ 200 ಹುದ್ದೆಗಳಿಗೆ 2018ರ ಜೂನ್ನಲ್ಲಿ ಅರ್ಜಿ ಆಹ್ವಾನಿಸಿತ್ತು. ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2020 ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಿ, ನಂತರ ಕೀ-ಉತ್ತರ ಸಹ ಬಿಡುಗಡೆ ಮಾಡಿತ್ತು. ಆದರೆ, ಈವರೆಗೆ ಅಂತಿಮ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಿಲ್ಲ. ಪ್ರಕ್ರಿಯೆಗಳ ಪ್ರಕಾರ ತಾತ್ಕಾಲಿಕ ಅರ್ಹತಾ ಪಟ್ಟಿ ಬಿಡುಗಡೆ, ದಾಖಲಾತಿ ಪರಿಶೀಲನೆ, ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಇದ್ಯಾವುದರ ಬಗ್ಗೆಯೂ ಕೆಎಸ್ಆರ್ಟಿಸಿ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಕರೊನಾ ಕಾರಣವೇ?: ಕರೊನಾ ಬಂದ ಮೇಲೆ ಹೊಸ ನೇಮಕಾತಿಗೆ ಅಧಿಸೂಚನೆ ಹಾಗೂ ಹಳೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಕೆಎಸ್ಆರ್ಟಿಸಿ ನೇಮಕಾತಿಗೆ ಅನುಮೋದನೆ ಸಿಕ್ಕಿಲ್ಲ ಎನ್ನಲಾಗಿದೆ.
ವಯೋಮಿತಿ ಮೀರುವ ಆತಂಕ: ನಾವು ವಯೋಮಿತಿ ಅಂಚಿನಲ್ಲಿದ್ದೇವೆ. ಹೀಗಾಗಿ ತಕ್ಷಣ ನೇಮಕ ಪ್ರಕ್ರಿಯೆ ಮುಂದುವರಿಸಬೇಕೆಂದು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ಇರುವವರಿಗೇ ವೇತನ ನೀಡುವುದು ಕಷ್ಟವಾಗಿದೆ. ಇಂತಹ ವೇಳೆಯಲ್ಲಿ ನೇಮಕಾತಿ ಮುಂದು ವರಿಸುವುದು ಕಷ್ಟ. ಆದರೂ, ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆ ದೊರೆತರೆ ಹೊಸ ಆರ್ಥಿಕ ವರ್ಷದಲ್ಲಿ ಪ್ರಕ್ರಿಯೆ ಆರಂಭಿಸುತ್ತೇವೆ.| ಶಿವಯೋಗಿ ಕಳಸದ ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ