ಬೆಂಗಳೂರು: ದೇವಸ್ಥಾನಗಳನ್ನು ಸರ್ಕಾರಿಗೊಳಿಸುವ ರೀತಿಯಲ್ಲೇ ಮಸೀದಿಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಮುಂಬೈನ ಹಿರಿಯ ಪತ್ರಕರ್ತ ಪುಷ್ಪೇಂದ್ರ ಕುಲಶ್ರೇಷ್ಠ ಆಗ್ರಹಿಸಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟ್, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈಯ ದಾದರ್‌ನಲ್ಲಿರುವ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಮಾತನಾಡಿದರು.
ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ? ದೇವಸ್ಥಾನಗಳ ಸರಕಾರಿಕರಣ ಯಾರು ಮಾಡಿದರು? ದೇವಸ್ಥಾನಗಳ ಹಾಗೆ ಸರ್ಕಾರವು ಮಸೀದಿಗಳನ್ನು ಏಕೆ ವಶಪಡಿಸಿಕೊಳ್ಳಲಿಲ್ಲ? ಎಂದು ಅವರು ಪ್ರಶ್ನಿಸಿದರು.
ಕಾಶ್ಮೀರದಿಂದ ಕಾಶ್ಮೀರಿ ಪಂಡಿತರನ್ನು ಹೊರಹಾಕಲಾಯಿತು. ಇದರ ಬಗ್ಗೆ ಹಿಂದೂಗಳು ಉಗ್ರ ಹೋರಾಟ ಮಾಡಲಿಲ್ಲ. ಆದರೆ, ಗಾಜಿಯಾಬಾದಿನಲ್ಲಿ ಒಂದು ನಿರ್ದಿಷ್ಟ ಗುಂಪಿನಿಂದ ಹತ್ಯೆಗಳು ನಡೆದ ಬಳಿಕ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಲಾಯಿತು. ಸ್ವಾತಂತ್ರ್ಯದ ನಂತರ 477 ಹಿಂದೂ ಯುವಕ-ಯುವತಿಯರನ್ನು ಗುಂಪುಕಟ್ಟಿ ಕೊಲ್ಲಲಾಯಿತು (ಮಾಬ್ ಲಿಚಿಂಗ್). ಈ ಬಗ್ಗೆ ಯಾರೂ ಧ್ವನಿಯೆತ್ತಲಿಲ್ಲ. ದೇಶದಲ್ಲಿ 85 ಕೋಟಿ ಹಿಂದುಗಳಿರುವಾಗ ಈ ರೀತಿಯ ಘಟನೆಗಳು ನಡೆಯುತ್ತವೆ. ಆದ್ದರಿಂದ ಹಿಂದುತ್ವದ ಹಿತಕ್ಕಾಗಿ ಹಿಂದೂಗಳೇ ಕಾರ್ಯ ಮಾಡುವುದು ಅವಶ್ಯಕವಾಗಿದೆ ಎಂದು ಪುಷ್ಪೇಂದ್ರ ಕುಲಶ್ರೇಷ್ಠ ವಿವರಿಸಿದರು.
ವೇದಿಕೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟಿನ ಅಧ್ಯಕ್ಷ ಪ್ರವೀಣ ಕಾನವಿಂದೆ, ಟ್ರಸ್ಟ್ ಪದಾಧಿಕಾರಿ ಶಶಾಂಕ ಗುಳಗುಳೆ, ನಿತಿನ್ ಸರದೇಸಾಯಿ, ಮುಂಬೈನ ಸರ್ಜನ್ ಡಾ. ಅಮಿತ ತಡಾನಿ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಚತ್ತೀಸ್‌ಗಡ ರಾಜ್ಯ ಸಂಘಟಕ ಸುನಿಲ ಘನವಟ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ ಹಾಜರಿದ್ದರು.
ಪುಸ್ತಕ ಬಿಡುಗಡೆ:
ಇದೇ ವೇಳೆ ಖ್ಯಾತ ಸರ್ಜನ್ ಡಾ. ಅಮಿತ್ ತಡಾನಿ ಬರೆದಿರುವ ‘ದಾಬೋಲಕರ್ - ಪಾನಸರೇ ಹತ್ಯೆ: ಸಮೀಕ್ಷೆಯಲ್ಲಿನ ರಹಸ್ಯಗಳು’ ಎಂಬ ಮರಾಠಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀಗಣೇಶನ ಶ್ಲೋಕ, ಶಂಖನಾದ, ವೇದಮಂತ್ರ ಪಠಣ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆ ನಡೆಯಿತು.