ನ್ಯೂಸ್

ನ.1ರಂದು ಪದವಿ ಕ್ಲಾಸ್ ಶುರು

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಪದವಿ ಮತ್ತು ಸ್ನಾತಕೋತ್ತರ ಪದವಿಯ ಮೊದಲ ವರ್ಷದ ಕೋರ್ಸ್​ಗಳನ್ನು ನ.1ರಂದು ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರವೇಶಾತಿ ಪ್ರಕ್ರಿಯೆಯನ್ನು ಅ. 31ರೊಳಗೆ ಮುಗಿಸುವಂತೆ ಸೂಚಿಸಿದೆ. ಆದರೆ ತರಗತಿಗಳು ಭೌತಿಕ ಅಥವಾ ಆನ್​ಲೈನ್ ಮೂಲಕ ನಡೆಯಲಿವೆಯೇ ಎಂಬ ಬಗ್ಗೆ ಮಾರ್ಗಸೂರ್ಚಿಯಲ್ಲಿ ಸ್ಪಷ್ಟನೆ ಇಲ್ಲ. ಮೊದಲ ಸೆಮಿಸ್ಟರ್ ಪರೀಕ್ಷೆಗಳು 2021ರ ಮಾರ್ಚ್ 8 ರಿಂದ 23ರ ನಡುವೆ, ಎರಡನೇ ಸೆಮಿಸ್ಟರ್ ಏಪ್ರಿಲ್ 5ರಂದು ಆರಂಭವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

ಕಲಿಕೆ ಸಮಯವನ್ನು ಸರಿದೂಗಿಸಲು ವಾರದಲ್ಲಿ 6 ದಿನ ತರಗತಿಗಳನ್ನು ನಡೆಸುವಂತೆ, ವಿರಾಮ, ರಜಾದಿನಗಳನ್ನು ಮೊಟಕುಗೊಳಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಶೈಕ್ಷಣಿಕ ಸಂಸ್ಥೆಗಳಿಗೆ ಸೂಚಿಸಿದೆ. ಹಣಕಾಸು ತೊಂದರೆ ಅನುಭವಿಸುತ್ತಿರುವ ಪಾಲಕರು ಮಕ್ಕಳ ದಾಖಲಾತಿ ರದ್ದುಪಡಿಸಲು ಅಥವಾ ಬೇರೆ ಕಾಲೇಜುಗಳಿಗೆ ವರ್ಗಾವಣೆ ಬಯಸಿದರೆ ಅವರು ಪಾವತಿಸಿರುವ ಸಂಪೂರ್ಣ ಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂದಿರುಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.