ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತಕುಮಾರ್, ರಘುಪತಿ, ಡಾ. ಸತೀಶ್‌ಕುಮಾರ್ ಶೆಟ್ಟಿ, ಸೀತಾರಾಮ್, ಎಸ್.ಬಿ.ಅಶೋಕ್‌ಕುಮಾರ್ ಕೆ.ಆರ್.ವಾಟರ್ ವರ್ಕ್ಸ್‌ಗೆ ಭೇಟಿ ನೀಡಿ ನೀರು ಶುದ್ಧೀಕರಣದ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು. 
ನ್ಯೂಸ್

ನೀರು ಶುದ್ಧೀಕರಣ ಘಟಕದಲ್ಲೇ ಲೋಪ

ಶಿವಮೊಗ್ಗ: ನಗರಕ್ಕೆ ಕಂದು ಬಣ್ಣದ ನೀರುವ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಸೋಮವಾರ ಕೆ.ಆರ್. ವಾಟರ್ ವರ್ಕ್ಸ್‌ಗೆ ಭೇಟಿ ನೀಡಿದ್ದರು. ಇಂಜಿನಿಯರ್‌ಗಳಾದ ಜೀವನ್ ಹಾಗೂ ಮಿಥುನ್ ಅವರೊಂದಿಗೆ ಚರ್ಚಿಸಿದರು.

ನಗರ ನೀರು ಸರಬರಾಜು ಮಂಡಳಿ ತಿಳಿಸಿರುವಂತೆ ಮಳೆ ಕಾರಣದಿಂದ ನೀರಿನಲ್ಲಿ ಮಣ್ಣಿನಾಂಶ ಸೇರಿಲ್ಲ. ನೀರು ಶುದ್ಧೀಕರಣ ಹಾಗೂ ನಿರ್ವಹಣೆಯಲ್ಲಿ ಲೋಪ ಆಗಿರುವುದರಿಂದ ಮಣ್ಣಿನ ಬಣ್ಣದ ನೀರು ಸರಬರಾಜು ಆಗಲು ಕಾರಣ ಎಂದು ಒಕ್ಕೂಟದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ನೀರು ಶುದ್ಧೀಕರಣ ಘಟಕದಲ್ಲಿರುವ ಮೂರು ಕ್ಲಾರಿ ಪ್ಲಕ್ಚುವೇಟರ್ ಸ್ಥಗಿತವಾಗಿ ಎರಡು ತಿಂಗಳಾಗಿವೆ. ಈ ಹಂತದಲ್ಲಿಯೇ ಶೇ.85ರಷ್ಟು ಶುದ್ಧೀಕರಣ ಆಗುತ್ತದೆ. ಪ್ರಯೋಗಾಲಯದ ಉಪಕರಣಗಳು ಕೆಲಸ ಮಾಡುತ್ತಿಲ್ಲ. ನೀರು ಶುದ್ಧೀಕರಣಕ್ಕೆ ಸರಿಯಾದ ಪ್ರಮಾಣದಲ್ಲಿ ಆಲಂ ಬಳಕೆ ಮಾಡುತ್ತಿಲ್ಲ. ಕ್ಲೋರಿನ್ ಅಳತೆ ಮಾಡುವ ಎರಡೂ ಗೇಜ್‌ಗಳು ಹಾಳಾಗಿವೆ. ಹೀಗಾಗಿ ನೀರಿಗೆ ಅವೈಜ್ಞಾನಿಕವಾಗಿ ಕ್ಲೋರಿನ್ ಸೇರಿಸಲಾಗುತ್ತಿದೆ ಎಂದು ಭೇಟಿ ನೀಡಿದ ತಂಡ ತಿಳಿಸಿದೆ.
ತಂಡದಲ್ಲಿ ಕೆ.ವಿ.ವಸಂತಕುಮಾರ್, ಡಾ. ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್‌ಕುಮಾರ್, ಸೀತಾರಾಮ್, ವಿನೋದ್ ಪೈ, ಸುಬ್ರಹ್ಮಣ್ಯ, ರಘುಪತಿ ಇತರರಿದ್ದರು.