Delhi: ದೆಹಲಿಯ ಕೆಂಪು ಕೋಟೆಯ (Delhi Blast) ಬಳಿ ಸೋಮವಾರ (ನ 10) ನಡೆದ ಕಾರು ಸ್ಫೋಟಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಪ್ರತಿಜ್ಞೆ ಮಾಡಿದ್ದಾರೆ.
ದೆಹಲಿ ರಕ್ಷಣಾ ಸಂವಾದವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ನಡೆದಿರುವ ದುರಂತ ಖಂಡನೀಯ, ಇದಕ್ಕೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತರುವವರೆಗೂ ವಿರಮಿಸುವುದಿಲ್ಲ, ಎಂತಹ ಸಂದರ್ಭ ಎದುರಾದರು ಅವರನ್ನು ಬಿಡುವ ಪ್ರಶ್ನೆಯೆ ಇಲ್ಲ ಎಂದು ನಾನು ರಾಷ್ಟ್ರಕ್ಕೆ ದೃಢವಾಗಿ ಭರವಸೆ ನೀಡುತ್ತೇನೆ ಎಂದರು. ಸಂಭವಿಸಿರುವ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ ಸಿಂಗ್, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದರು ಮತ್ತು ಈ ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವ ಭರವಸೆ ನೀಡಿದರು. ಉನ್ನತ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದು, ಸಂಬಂಧಪಟ್ಟ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಸುರಕ್ಷಿತ ದತ್ತಾಂಶ ವ್ಯವಸ್ಥೆಗಳು, ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್‌ಗಳು ಮತ್ತು ನೈಜ-ಸಮಯದ ಸಂವಹನ ಸಾಧನಗಳಂತಹ ಅದೃಶ್ಯ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರವನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, ಫೈಟರ್ ಜೆಟ್‌ಗಳು, ಕ್ಷಿಪಣಿಗಳಂತೆ ಗೋಚರಿಸದಿದ್ದರೂ, ಈ ತಂತ್ರಜ್ಞಾನಗಳು ಕಾರ್ಯಾಚರಣೆಯ ದಕ್ಷತೆ ಮತ್ತು ಸಮನ್ವಯತೆ ದೃಷ್ಠಿಯಿಂದ ತುಂಬಾ ಮುಖ್ಯ ಎಂದು ಹೇಳಿದರು. ತಂತ್ರಜ್ಞಾನ ಎನ್ನುವುದು ಶಸ್ತ್ರಾಸ್ತ್ರಗಳು ಮತ್ತು ವೇದಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ನಮ್ಮ ಸಂಸ್ಥೆಗಳನ್ನು ವೇಗವಾಗಿ, ಹೆಚ್ಚು ಪಾರದರ್ಶಕವಾಗಿರುವ ವ್ಯವಸ್ಥೆಗಳಲ್ಲಿಯೂ ಸ್ಥಾನ ಪಡೆದಿವೆ ಎಂದು ಅಭಿಪ್ರಾಯಪಟ್ಟರು.
ಭಾರತಕ್ಕೆ ತನ್ನ ಮುಂದಿನ ಹಾದಿ ಸ್ಪಷ್ಟವಾಗಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಈಗ ತಂತ್ರಜ್ಞಾನದ ನೇತೃತ್ವವನ್ನು ತೆಗೆದುಕೊಂಡು ಹೋಗಬೇಕಿದೆ, ಇಷ್ಟರಲ್ಲಿಯೇ ನಾವು ತೃಪ್ತರಾಗದೆ, ಇನ್ನೂ ಹೆಚ್ಚಿನ ವೇಗವನ್ನು ನಿಗದಿಪಡಿಸಿಕೊಂಡು, ಈ ಮೂಲಕ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ರಾಷ್ಟ್ರದ ಯುವ, ಸೃಜನಶೀಲ ಕಾರ್ಯಪಡೆ ಮತ್ತು ಅದರ ರೋಮಾಂಚಕ ನವೋದ್ಯಮ ಸಂಸ್ಕೃತಿಯನ್ನು ಶ್ಲಾಘಿಸಿದ ಸಿಂಗ್, ಈ ಸಾಮರ್ಥ್ಯ ದೇಶವನ್ನು ಜಾಗತಿಕ ರಕ್ಷಣಾ ನಾವೀನ್ಯತೆ ನಾಯಕತ್ವದತ್ತ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ. ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು (ಮಂಗಳವಾರ 11) ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಈ ವೇಳೆ ಮಾತನಾಡಿದ ಷಾ, ಎಲ್ಲಾ ಕೋನದಿಂದಲೂ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು. ಪ್ರಾರಂಭಿಕ ತನಿಖೆಯ ಪ್ರಕಾರ ಈ ವಾಹನವನ್ನು ಪುಲ್ವಾಮಾ ನಿವಾಸಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಇದು ಭಯೋತ್ಪಾದಕ ಸಂಪರ್ಕದ ಕುರಿತಾದ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಸ್ಫೋಟವಾಗುವ ಕೆಲವೇ ಕ್ಷಣಗಳ ಮೊದಲು ಕೆಂಪು ಕೋಟೆಯ ಬಳಿ, ಶಂಕಿತನ ಕಾರು ಇರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಪೊಲೀಸರು 100 ಕ್ಕೂ ಹೆಚ್ಚು ವೀಡಿಯೊ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಭವಿಸಿರುವ ಘಟನೆಯು ಯೋಜಿತ ಭಯೋತ್ಪಾದಕ ದಾಳಿಯೇ, ಇಲ್ಲವೇ ಆತ್ಮಹುತಿ ಬಾಂಬ್ ದಾಳಿಯೇ ಎಂದು ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಲಾಗಿದೆ.(ಏಜೆನ್ಸೀಸ್)