ನವದೆಹಲಿ: ಸನಾತನ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಗೆ ಶನಿವಾರ ಉತ್ತರಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಸನಾತನ ಧರ್ಮಕ್ಕೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ, ಜಗತ್ತಿನ ಯಾವ ಶಕ್ತಿಯೂ ಅದನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಲಕ್ನೋದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಪೂರ್ಣ ವಿವಾದ ದುರದೃಷ್ಟಕರ ಎಂದು ಬಣ್ಣಿಸಿದರು. ಸನಾತನ ಧರ್ಮವು ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದೆ. ಅಂದರೆ ಇಡೀ ವಿಶ್ವವೇ ನಮ್ಮ ಕುಟುಂಬವಾಗಿದೆ ಎಂದರು.
ಮನೆಯಲ್ಲಿ ತಾಯಂದಿರು, ಸಹೋದರಿಯರು ಹಿಟ್ಟು ಕಲಸುವಾಗ ಇರುವೆ ಹಾದು ಹೋದರೆ ಅದಕ್ಕೆ ಸ್ವಲ್ಪ ಪಾಲು ಕೊಡುವ ಸಂಸ್ಕೃತಿ ನಮ್ಮದು. ಸನಾತನ ಧರ್ಮ ಶಾಶ್ವತ. ಜಗತ್ತಿನ ಯಾವ ಶಕ್ತಿಯೂ ಅದನ್ನು ನಾಶ ಮಾಡಲಾರದು ಎಂದು ತಿಳಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದಿನಿಂದ ಮೂರು ದಿನಗಳ ಲಕ್ನೋ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ತಮ್ಮ ಸಂಸದೀಯ ಕ್ಷೇತ್ರವನ್ನು ಪರಿಶೀಲಿಸುವುದರೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳ ಪರಿಶೀಲನೆ ನಡೆಸಲಿದ್ದಾರೆ. ವಿಶ್ವಕರ್ಮ ಜಯಂತಿಯಂದು ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆಯ ಬಿಡುಗಡೆ ರಿಲೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೆ.17ರಂದು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ.