ನ್ಯೂಸ್

ಆಪರೇಷನ್ ಮಾಯಾಜಾಲ: ರಾಜ್ಯವ್ಯಾಪಿ ವಿಸ್ತರಿಸಿದ ಪಕ್ಷಾಂತರ ಚರ್ಚೆ; ನಾಯಕರ ನಡೆಯತ್ತ ಕುತೂಹಲ

Webdesk - Ravikanth

ಬೆಂಗಳೂರು: ಭರ್ತಿ ಶಾಸಕ ಬಲವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್​ನ ಸ್ಥಳೀಯ ನಾಯಕರನ್ನು ಸೆಳೆಯಲು ಅಧಿಕಾರದ ಪ್ರಲೋಭನೆ ಒಡ್ಡುತ್ತಿರುವ ಕಾಂಗ್ರೆಸ್​ನ ತಂತ್ರಗಾರಿಕೆ ಸಂಚಲನ ಮೂಡಿಸಿದೆ.

ದುಡುಕಿನ ನಿರ್ಧಾರದಿಂದ ರಾಜಕೀಯವಾಗಿ ಅತಂತ್ರರಾಗುತ್ತೀರಿ ಎಂಬ ಎಚ್ಚರಿಕೆ ಮೂಲಕ ನಾಯಕರನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಜೆಡಿಎಸ್ ವರಿಷ್ಠರು ಖುದ್ದಾಗಿ ಶಾಸಕರು, ಅಭ್ಯರ್ಥಿಗಳಿಗೆ ಕರೆ ಮಾಡಿ, ತಾಳ್ಮೆಯಿಂದಿರಿ ಕಾಲ ಬದಲಾಗಲಿದೆ ಎಂದು ವಿಶ್ವಾಸ ತುಂಬುವ ಕಸರತ್ತಿಗಿಳಿದಿದ್ದಾರೆ.

ಸಚಿವರ ವಿರುದ್ಧ ಬೇಸರ, ವಿಶೇಷ ಅನುದಾನಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ವರ್ಗಾವಣೆ ವಿಷಯಗಳು ಪಕ್ಷದಲ್ಲಿಯೇ ಚರ್ಚೆಯ ವಸ್ತುವಾಗಿದ್ದವು. ಈಗ ಪಕ್ಷಾಂತರ ಗಲಿಬಿಲಿಯ ದಾಳ ಉರುಳಿದೆ. ಇನ್ನು, ಬೆಂಗಳೂರಿನಲ್ಲಿ ಆರಂಭವಾದ ಪಕ್ಷಾಂತರ ಚರ್ಚೆ ಇಡಿ ರಾಜ್ಯಕ್ಕೂ ವಿಸ್ತರಣೆಯಾಗಿದ್ದು, ಅನೇಕ ನಾಯಕರ ಹೆಸರು ಕೇಳಿಬರುತ್ತಿದೆ. ಅಲ್ಲದೇ ಆಡಳಿತ ಪಕ್ಷದ ಶಾಸಕರು, ಸಚಿವರನ್ನು ಬಿಜೆಪಿ, ಜೆಡಿಎಸ್ ನಾಯಕರು ಭೇಟಿ ಮಾಡಿದ ವಿಷಯ ಮಹತ್ವ ಪಡೆದುಕೊಳ್ಳುತ್ತಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರನ್ನೂ ಭೇಟಿ ಮಾಡಿ ಸಂಚಲನ ಮೂಡಿಸಿದ್ದರು. ಜೆಡಿಎಸ್​ನ ಮಾಜಿ ಸಚಿವ ಪುಟ್ಟರಾಜು, ನಾರಾಯಣಗೌಡ ಹೆಸರು ಕೂಡ ಚಲಾವಣೆಗೆ ಬಂದಿದೆ. ಧಾರವಾಡ ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಬಹುದು ಎಂದು ಸಚಿವ ಸಂತೋಷ್ ಲಾಡ್ ಭಾನುವಾರ ಹೇಳಿಕೆ ನೀಡಿದ್ದರು.

ಅದರ ಬೆನ್ನಲ್ಲೇ ಶಂಕರ್ ಪಾಟೀಲ್ ಮುನೇನಕೊಪ್ಪ ಮತ್ತು ಚಿಕ್ಕನಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಿದಾಡಿತ್ತು. ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮುನೇನಕೊಪ್ಪ ನವೆಂಬರ್​ವರೆಗೂ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳುವ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.

ಸೋಮವಾರದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಬಿಜೆಪಿ ಶಾಸಕರು, ಮಾಜಿ ಶಾಸಕರು ಪಕ್ಷಾಂತರದ ಕುರಿತು ಬಗೆಬಗೆಯ ಅಭಿಪ್ರಾಯಗಳನ್ನು ನೀಡಿದ್ದಾರೆ.

ಅಡ್ಡಗೋಡೆಮೇಲೆ ದೀಪವಿಟ್ಟ ಮುನೇನಕೊಪ್ಪ: ಬಿಜೆಪಿ ತ್ಯಜಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಆಪ್ತ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸುದ್ದಿಗೋಷ್ಠಿ ಕರೆದು ಕುತೂಹಲ ಮೂಡಿಸಿದ್ದರು. ಕಾಂಗ್ರೆಸ್​ನ ಯಾವೊಬ್ಬ ಮುಖಂಡರೂ ಪಕ್ಷಕ್ಕೆ ಆಹ್ವಾನಿಸಿಲ್ಲ. ಸದ್ಯಕ್ಕೆ ಬಿಜೆಪಿಯಲ್ಲಿಯೇ ಇದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮಹಾತ್ವಾಕಾಂಕ್ಷೆ ಇಲ್ಲ. ನನ್ನ ಮುಂದಿನ ರಾಜಕೀಯ ನಿರ್ಧಾರವನ್ನು ಕ್ಷೇತ್ರದ ಪ್ರಮುಖರೊಂದಿಗೆ ರ್ಚಚಿಸಿ ಜನವರಿಗೆ ಬಹಿರಂಗಪಡಿಸುತ್ತೇನೆ ಎಂದು ಹೇಳಿಕೆ ನೀಡಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಗೊಂದಲ ಉಳಿಸಿದರು.

ಮುಕ್ತ ಆಹ್ವಾನ ನೀಡಿದ ಸಿಎಂ: ಕಾಂಗ್ರೆಸ್​ನಿಂದ ಹೋದವರು ಮಾತ್ರವಲ್ಲ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬರುವವರು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ ರೀ...? ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಅವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದು ಕುಟುಕಿದರು.

ಎಸ್.ಟಿ. ಸೋಮಶೇಖರ್ ಅತ್ಯಾಸಕ್ತಿ: ಶಾಸಕ ಎಸ್.ಟಿ. ಸೋಮಶೇಖರ್ ಸೋಮವಾರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಪೂರ್ವ ತಯಾರಿ ಸಭೆ ನಡೆಸಿ ಗಮನ ಸೆಳೆದರು. ಕ್ಷೇತ್ರದ 17 ಪಂಚಾಯಿತಿ ವ್ಯಾಪ್ತಿಯ ಮುಖಂಡರದೊಂದಿಗೆ ರ್ಚಚಿಸಿ, ಬಿಪಿಎಲ್ ಕುಟುಂಬದ ನಿಖರ ಮಾಹಿತಿ ಪಡೆಯಬೇಕು. ಎಲ್ಲರೂ ಶ್ರಮ ಹಾಕಿದರೆ ಯೋಜನೆಯ ಫಲ ನೂರಕ್ಕೆ ನೂರರಷ್ಟು ಅರ್ಹರಿಗೆ ತಲುಪಿಸಲು ಸಾಧ್ಯವಿದೆ ಎಂದರು. ಸರ್ಕಾರದ ಯೋಜನೆ ಲಾಭ ಕೊಡುತ್ತಿಲ್ಲವೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದಲ್ಲಿ, ನಾನು ಬಿಜೆಪಿ ಶಾಸಕನೆಂದು ಹೇಳಿ ನುಣುಚಿಕೊಳ್ಳಲಾಗದು ಎಂದು ಸಮರ್ಥಿಸಿಕೊಂಡರು.

ಯಾರೊಬ್ಬರೂ ಇನ್ನೊಂದು ಪಕ್ಷವನ್ನು ನಂಬಿ ಕೊಂಡು ಬಿಟ್ಟು ಹೋಗಲ್ಲ. ಅದೆಲ್ಲವೂ ಊಹಾಪೋಹ. ಯಾರಾದರೂ ಹೋಗುವವರಿದ್ದರೆ ಸರಿಮಾಡಿಕೊಳ್ಳುತ್ತೇವೆ. | ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ ಬಿಜೆಪಿಯ ಹಲವರು ಕಾಂಗ್ರೆಸ್​ಗೆ ಬರುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ ಬಿಜೆಪಿಯಿಂದ ಕಾಂಗ್ರೆಸ್​ಗೆ ಯಾರಾದರೂ ಸೇರಿದ್ದಾರೆಯೇ? ಎಲ್ಲರೂ ಬಿಜೆಪಿಯಲ್ಲಿಯೇ ಇಲ್ಲವೇ? | ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ ನಾವು ಯಾರನ್ನೂ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿಲ್ಲ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆಯೋ ಅಲ್ಲಿ ಸಂಘಟನೆ ಗಟ್ಟಿ ಮಾಡಬೇಕಿದೆ. ಪಕ್ಷ ಸದೃಢ ಮಾಡಿ ಅಂತ ಅಧ್ಯಕ್ಷರು, ವರಿಷ್ಠರು ಸೂಚಿಸಿದ್ದಾರೆ. ನಮ್ಮ ಬಳಿ ಆಪರೇಷನ್ ಎಂಬ ಪದವೇ ಇಲ್ಲ. | ಡಿ.ಕೆ. ಸುರೇಶ್, ಸಂಸದ ನಾವು ಯಾರನ್ನು ಒತ್ತಾಯ ಮಾಡಿ ಕರೆಯುವುದಿಲ್ಲ. ಅವರಾಗೇ ನಮ್ಮ ಪಕ್ಷಕ್ಕೆ ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ. ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಬಿಜೆಪಿ ಮಾಡಬೇಕು. | ರಾಮಲಿಂಗಾರೆಡ್ಡಿ, ಸಚಿವ ಬಹಳ ಮುಖಂಡರು ಬಿಜೆಪಿ, ಜೆಡಿಎಸ್​ನಿಂದ ಕಾಂಗ್ರೆಸ್ಸಿಗೆ ಬರಲಿದ್ದಾರೆಂಬ ಬಗ್ಗೆ ವಿವಿಧ ಹಂತಗಳಲ್ಲಿ ಚರ್ಚೆಯಾಗುತ್ತಿದೆ. ಯಾರ್ಯಾರು ಬರಲಿದ್ದಾರೆ ಎಂದು ನೋಡೋಣ. ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. | ಜಿ. ಪರಮೇಶ್ವರ, ಗೃಹ ಸಚಿವ ಕಲ್ಯಾಣ ಕರ್ನಾಟಕದ ಹಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್​ಗೆ ಬರುವ ಬಗ್ಗೆ ಪಕ್ಷದ ನಾಯಕರ ಜತೆ ರ್ಚಚಿಸಲಾಗಿದೆ. ಪಕ್ಷ ಸೇರ್ಪಡೆಯಿಂದ ಆಗುವ ಲಾಭ, ನಷ್ಟಗಳ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. | ಎನ್.ಎಸ್. ಬೋಸರಾಜು, ಸಚಿವ ಬಿಜೆಪಿಯಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್​ಗೆ ಬರುತ್ತಾರೆ. ಅವರ ಹೆಸರನ್ನು ನಾನು ಈಗ ಬಹಿರಂಗ ಪಡಿಸುವುದಿಲ್ಲ. ನಾನಾ ಗಿಯೇ ಯಾರಿಗೂ ಬಿಜೆಪಿ ಬಿಟ್ಟು ಬನ್ನಿ ಎಂದು ಹೇಳಿಲ್ಲ. ಅವರೇ ನನಗೆ ಕರೆ ಮಾಡುತ್ತಿದ್ದಾರೆ. | ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ

ಮೈತ್ರಿ ಮುರಿದವರ ಗೌಪ್ಯ ಚರ್ಚೆ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ. ಯೋಗೇಶ್ವರ್ ರಹಸ್ಯವಾಗಿ ಭೇಟಿ ಮಾಡಿ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಯೋಗೇಶ್ವರ್ ಸೆಳೆದು, ರಮೇಶ್ ಸಕ್ರಿಯರಾಗದಂತೆ ನೋಡಿಕೊಂಡರೆ ಬಿಜೆಪಿಗೆ ಹೊಡೆತ ಕೊಟ್ಟಂತಾಗಿ ಕಾಂಗ್ರೆಸ್​ಗೆ ಲಾಭವಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ರಮೇಶ್ ಜಾರಕಿಹೊಳಿಯವರ ಸದಾಶಿವನಗರದ ಮನೆಯಲ್ಲಿ 2 ತಾಸು ಮಾತುಕತೆ ನಡೆಸಿದ್ದಾರೆ.