ನ್ಯೂಸ್

‘ದ ನ್ಯೂಸ್ ಮಿನಿಟ್’ ವಿರುದ್ಧ ಮಾನಹಾನಿ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಕೋವಿಡ್ ಲಸಿಕೆ ಪಡೆಯಲು ಬಿಜೆಪಿ ಶಾಸಕ ಎಲ್.ಎ. ರವಿಸುಬ್ರಮಣ್ಯಗೆ ಲಂಚ ನೀಡಬೇಕು ಎಂಬ ವೈರಲ್ ಆಡಿಯೊ ಆಧರಿಸಿ ಸುದ್ದಿ ಪ್ರಕಟಿಸಿದ್ದ ‘ದ ನ್ಯೂಸ್ ಮಿನಿಟ್’ ಮಾಧ್ಯಮ ಸಂಸ್ಥೆ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣ ರದ್ದು ಕೋರಿ ‘ದ ನ್ಯೂಸ್ ಮಿನಿಟ್’ನ ಮಾತೃಸಂಸ್ಥೆ ಸ್ಪುಂಕ್ಲೇನ್ ಮೀಡಿಯಾ ಪ್ರೈ.ಲಿ. ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರರು ತಮ್ಮ ಘನತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಸುದ್ದಿ ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಆದರೆ ನಾವು ಎಲ್ಲಿಯೂ ವೈಯಕ್ತಿಕ ನೆಲೆಯಲ್ಲಿ ಸುದ್ದಿ ಪ್ರಕಟಿಸಿಲ್ಲ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವಾದ ಆಲಿಸಿದ ನ್ಯಾಯಪೀಠ, ದೂರುದಾರ ರವಿಸುಬ್ರಮಣ್ಯ ವಿರುದ್ಧ ‘ದ ನ್ಯೂಸ್ ಮಿನಿಟ್’ ಪ್ರಕಟಿಸಿರುವ ಸುದ್ದಿಯಲ್ಲಿ ಮಾನಹಾನಿ ಹೇಳಿಕೆ ಪ್ರಕಟಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಇದನ್ನು ಪರಿಗಣಿಸಿ ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಮಾನಹಾನಿ ಪ್ರಕರಣದ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.