ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಸಾರಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ ಸಿಬ್ಬಂದಿ ಚಿಕಿತ್ಸೆ ಕೊಡಿಸಲು ಕೊಂಡೊಯ್ಯುತ್ತಿರುವುದು. 
ನ್ಯೂಸ್

ಬಸ್ ನಿಲ್ದಾಣಕ್ಕೆ ಓಡಿಬಂದ ಜಿಂಕೆಯ ರಕ್ಷಣೆ

ಎಂ.ರವಿ
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಯಲ್ಲಿ ಬೀದಿನಾಯಿಗಳ ದಾಳಿಯಿಂದ ಪಾರಾಗಲು ಸಾರಿಗೆ ಬಸ್ ನಿಲ್ದಾಣದೊಳಕ್ಕೆ ಬಂದ ಜಿಂಕೆಯನ್ನು ಸಾರ್ವಜನಿಕರು ರಕ್ಷಿಸಿ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಯಿತು.
ಸೋಮವಾರ ಬೆಳಗ್ಗೆ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಜಿಂಕೆಯೊಂದು ಬಸ್ ನಿಲ್ದಾಣದ ಒಳಗೆ ಓಡಿ ಬಂದಿದೆ. ಅಲ್ಲಿದ್ದ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಅಲ್ಲಿದ್ದ ಮಳಿಗೆಯೊಳಗೆ ಕೂಡಿಹಾಕಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಬಫರ್ ವಲಯದ ಸಿಬ್ಬಂದಿ ನಾಯಿಗಳ ದಾಳಿಯಿಂದ ಹಿಂಭಾಗದಲ್ಲಿ ತೀವ್ರ ಗಾಯಗೊಂಡ ಜಿಂಕೆಯನ್ನು ಪಶುವೈದ್ಯರ ಬಳಿಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದರು. ವೈದ್ಯರ ಸಲಹೆ ಮೇರೆಗೆ ಜಿಂಕೆಯನ್ನು ಕಾಡಿಗೆ ಬಿಡಲಾಯಿತು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ತಿಳಿಸಿದ್ದಾರೆ.
ಒಂದೇ ವಾರದಲ್ಲಿ ಬೀದಿನಾಯಿ ದಾಳಿಗೆ ತುತ್ತಾದ ಎರಡು ಜಿಂಕೆಗಳು: ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದ ಪೊಲೀಸ್ ಠಾಣೆಯ ಹಿಂಭಾಗ ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದ ಜಿಂಕೆಯನ್ನು ಸಾರ್ವಜನಿಕರು ರಕ್ಷಿಸಿ ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದರು. ಆದರೆ ಗಾಯಗೊಂಡಿದ್ದ ಜಿಂಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿಯೇ ಸಾವಿಗೀಡಾಗಿತ್ತು. ಇದು ಮರೆಯುವ ಮೊದಲೇ ಮತ್ತೊಂದು ಜಿಂಕೆ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿರುವುದು ಸಾರ್ವಜನಿತರ ಆತಂಕಕ್ಕೆ ಕಾರಣವಾಗಿದೆ.