ನವದೆಹಲಿ: ಸಾವರ್ಜನಿಕರ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದಿರುವ ಹಲ್ಲೆಯಿಂದ ಬೇಸರಗೊಂಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅಮೆರಿಕದ ಜನರೊಂದಿಗೆ ನಾವಿದ್ಧೇವೆ ಎಂದು ಬರೆದುಕೊಂಡಿದ್ದಾರೆ.
ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ಸಾರ್ವಜನಿಕ ರ್‍ಯಾಲಿಯೊಂದನ್ನು ಉದ್ಧೇಶಿಸಿ ಮಾತನಾಡುವ ವೇಳೆ ಗುಂಡಿನ ದಾಳಿ ನಡೆದಿದ್ದು, ಸ್ಫೋಟದ ಸದ್ದಿಗೆ ಟ್ರಂಪ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ತಕ್ಷಣವೇ ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ ಟ್ರಂಪ್ ಮುಖ ಹಾಗೂ ಕಿವಿ ಭಾಗ ರಕ್ತಸಿಕ್ತವಾಗಿತ್ತು.
ಮಿಲ್ವಾಕಿಯಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗುವ ಎರಡು ದಿನಗಳ ಮೊದಲು ಈ ಘಟನೆ ನಡೆದಿದ್ದು, ಟ್ರಂಪ್ ಅವರನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 1981 ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ.