ಇಂಥ ಭಯಂಕರ ಕಾಳಗವನ್ನು ನಾನು ನೋಡಿಯೇ ಇರಲಿಲ್ಲ. ಇತಿಹಾಸದ ಪಾಠಗಳನ್ನು ಓದುವಾಗ ಮೇಷ್ಟ್ರು ಹೇಳಿದ್ದು, ನಾವೇ ಕಲ್ಪಿಸಿಕೊಂಡದ್ದು ಎಲ್ಲ ಸೇರಿಸಿದರೂ ಅದರ ಪರಿಣಾಮ ಇಷ್ಟೊಂದು ಭೀಕರವಾಗಿ ಎಂದೂ ಆಗಿರಲಿಲ್ಲ. ಕಣ್ಣೆದುರಿಗೇ ಇದು ನಡೆದು ಹೋದಾಗ ಮನಸ್ಸು ತುಂಬಿ, ಕಾಳಗಕ್ಕೆ ಹೊಸ ಹೊಸ ಆಯಾಮ ಕೂಡಿಕೊಂಡದ್ದು ನನ್ನ ಅನುಭವಕ್ಕೆ ಬಂತು. ಇದೇನು ಜಟ್ಟಿಗಳ ಕಾಳಗವಲ್ಲ. ಕತ್ತಿ ಹಿಡಿದ ಸೈನಿಕರದೂ ಅಲ್ಲ. ಕುದುರೆಗಳ ಮೇಲೆ ಕುಳಿತ ಸವಾರರು ನಡೆಸಿದ ಮಿಂಚಿನ ವೇಗದ ಕಾದಾಟವೂ ಅಲ್ಲ. ಹೀಗೆ ಇನ್ನೇನೇನೋ ಹೇಳಬಹುದು. ಅದು ಯಾವುದೂ ಅಲ್ಲ. ಎರಡು ಬೀದಿ ನಾಯಿಗಳ ಭಯಂಕರ ಯುದ್ಧ.
ಬೀದಿನಾಯಿಗಳೆಂದು ನಾನು ಸುಮ್ಮನೆ ಇರುವುದಕ್ಕೂ ಸಾಧ್ಯವಿರಲಿಲ್ಲ. ಒಂದು ನಮ್ಮದೇ ಬೀದಿಯ ನಾಯಿ. ಬೀದಿಯ ಎಂದೇಕೆ ಹೇಳಲಿ; ನಮ್ಮದೇ ನಾಯಿ. ಮನೆಯಲ್ಲಿ ಕಟ್ಟಿ ಬೆಳೆಸಿದ್ದಲ್ಲ. ಬೀದಿಯಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದು ನಮ್ಮ ಮನೆಗೆ ಹೊಂದಿಕೊಂಡದ್ದು. ಅದರ ಬಣ್ಣ, ಆಕಾರ, ನಡೆ, 'ನುಡಿʼ ನಮಗೆ ಇಷ್ಟವಾಗಿ ನಾವು ನಿತ್ಯ ಅನ್ನ ಹಾಕುತ್ತಿದ್ದೆವು. ಆಗಾಗ ಮೂಳೆ ಮಾಂಸಗಳೂ ಅದಕ್ಕೆ ಸಿಗುವಂತೆ ನೋಡಿಕೊಂಡಿದ್ದೆವು. ನಮ್ಮನ್ನು ನೋಡಿಯೋ ಅಥವಾ ಅವರ ಮನೆಯ ಉಳಿಕೆಯ ಆಹಾರ ಪದಾರ್ಥಗಳಿಗೆ ಒಂದು ಮೋಕ್ಷದ ದಾರಿಯೊ, ಅಂತೂ ನಮ್ಮ ಬೀದಿಯ ಗೃಹಿಣಿಯರೆಲ್ಲ ನಮ್ಮ ಮನೆಯ ಮುಂಭಾಗಕ್ಕೆ ಬಂದು ನಾವಿಟ್ಟ ತಟ್ಟೆಯಲ್ಲಿ ನಮ್ಮ ನಾಯಿಯ ಭಕ್ಷ್ಯವನ್ನು ಹಾಕಿ, ಅದನ್ನು ಭೋಜನಕ್ಕೆ ಆಹ್ವಾನಿಸಿ ಹೊರಟು ಹೋಗುತ್ತಿದ್ದರು.
ತಟ್ಟೆಯನ್ನು ತೊಳೆಯುವ ಕೆಲಸ ನಮ್ಮದು. ಇವತ್ತು ಬೆಳಗ್ಗೆ ನಾವು ನಮ್ಮ ನಾಯಿಗೆ ಊಟ ಹಾಕುವ ಸಮಯಕ್ಕೆ ಸರಿಯಾಗಿ ಇನ್ನೊಂದು ಬೀದಿನಾಯಿ ಬಂತು. ಅದರ ಬಣ್ನ, ಆಕಾರ, ಎತ್ತರ ಎಲ್ಲವೂ ನಮ್ಮ ನಾಯಿಯಂತೆಯೇ. ತದ್ರೂಪ ಎಂದರೂ ತಪ್ಪಿಲ್ಲ. ಅದೂ ಜೋಲು ನಾಲಗೆಯನ್ನು ಚಾಚಿಕೊಂಡೇ ಬಂತು. ತನ್ನ ಆಹಾರವನ್ನು ಇನ್ನೊಬ್ಬರು ಕಸಿದುಕೊಳ್ಳುವುದನ್ನು ಯಾರು ಸಹಿಸಲು ಸಾಧ್ಯ? ನಮ್ಮ ನಾಯಿ ಕದನಕ್ಕೆ ಕಹಳೆ ಊದಿಯೇ ಬಿಟ್ಟಿತು. ತನ್ನದು, ಪರರದು ಎನ್ನುವ ಭೇದವನ್ನು ಬದಿಗೊತ್ತಿ, ಆಗಂತುಕ ನಾಯಿ ಮುನ್ನುಗ್ಗಿತು. ನಮ್ಮ ವೀರನಿಗೆ ಇಷ್ಟೇ ಸಾಕಿತ್ತು. ನೋಡುನೋಡುತ್ತಿದ್ದಂತೆಯೇ ಕದನ ಸುರುವಾಯಿತು. ಬೀದಿಯಲ್ಲಿ ಜನರಿರಲಿಲ್ಲ. ಅಖಾಡ ಖುಲ್ಲಂ ಖುಲ್ಲ ತೆರೆದಿತ್ತು. ನಮ್ಮ ಪ್ರೀತಿಯಲ್ಲಿ ಬೆಳೆದ ನಮ್ಮ ನಾಯಿಯ ಒಂದು ಮುಖವನ್ನು ಮಾತ್ರ ನಾವು ಕಂಡಿದ್ದೆವು. ಅದು ಬಾಲವಾಡಿಸುವುದು, ಕಣ್ಣಿನಲ್ಲಿಯೇ ಪ್ರೀತಿಯನ್ನು ತುಂಬಿಕೊಂಡು ಹತ್ತಿರ ಬರುವುದು, ಕಾಲಸುತ್ತ ಸುಳಿದಾಡುವುದು, ಒಂದಿಷ್ಟು ಮೇಲಕ್ಕೆ ನೆಗೆದು, ಹಿಂಗಾಲ ಮೇಲೆ ನಿಂತುಕೊಂಡು ನಮ್ಮನ್ನು ಹಿಡಿಯಲು ನೋಡುವುದು. ಮಾತಿಲ್ಲದ ಪ್ರಾಣಿಗೆ ಎಷ್ಟೊಂದು ರೀತಿಗಳು. ಅದರ ಪ್ರೀತಿಯನ್ನು ನಾವು ಅನುಭವಿಸಿಯೇ ಊಟವನ್ನು ಕೊಡುತ್ತಿದ್ದೆವು.
ಆಗಾಗ ಅನ್ಯಜೀವಿಯ ಪ್ರವೇಶವಾದಾಗ ಬೀದಿಯೇ ನಡುಗುವಂತೆ ಬೊಗಳಿದರೂ, ಅದು ಅಂಥ ಉಗ್ರ ಸ್ವರೂಪದ ಬೊಗಳುವಿಕೆಯಲ್ಲ. ತನ್ನ ಪ್ರದೇಶಕ್ಕೆ ಕಾಲಿರಿಸಬೇಡಿ ಎಂಬ ಎಚ್ಚರಿಕೆ ಮಾತ್ರ ಅದಾಗಿತ್ತು. ಆ ಜೀವಿಗಳೂ ಈ ಎಚ್ಚರಿಕೆಯನ್ನು ಗಮನಿಸಿ ದೂರ ಸರಿದು ಹೋಗುತ್ತಿದ್ದವು. ಇಂಥ ನಮ್ಮ ನಾಯಿ, ಕಾಳಗದಲ್ಲಿ ಅದೆಂಥ ಉಗ್ರ ರೂಪ ತಳೆಯಿತು. ಇನ್ನೊಂದು ನಾಯಿಯೂ ಅಷ್ಟೆ, ಹಲ್ಲು ಕಿರಿದು, ನೋಟ ಚೂಪುಗೊಳಿಸಿ ಆಕ್ರಮಣಕ್ಕಿಳಿದ ರೀತಿ ಭಯ ಹುಟ್ಟಿಸುವಂತಿತ್ತು. ಅನ್ನಕ್ಕಾಗಿ, ಕಾಮಕ್ಕಾಗಿ ಮತ್ತು ತಮ್ಮ ಗಡಿಗೆರೆಗಾಗಿ ಕಾದುವುದು ಪ್ರಾಣಿಗಳಲ್ಲಿ ಸಹಜವಾದದ್ದು. ಮನುಷ್ಯರೂ ಇದಕ್ಕೆ ಹೊರತಲ್ಲ. ಇದು ನಿನ್ನೆ ಮೊನ್ನೆಯ ಸಂಗತಿಯಲ್ಲ. ಚರಿತ್ರೆಯ ಪುಟಗಳನ್ನು ತೆರೆದರೆ ಸಿಕ್ಕುವ ಎಲ್ಲ ಕದನಗಳ ಹಿಂದಿನ ಕಾರಣ ಇದೇ. ರಾಜರು ಹೆಣ್ಣಿಗಾಗಿ, ಹೊನ್ನಿಗಾಗಿ ಮತ್ತು ರಾಜ್ಯಕ್ಕಾಗಿ ಎಷ್ಟು ಕದನಗಳನ್ನು ಮಾಡಿಲ್ಲ. ಪುರಾಣಕ್ಕೆ ಹೋದರೂ ಈ ಸತ್ಯ ಬದಲಾಗುವುದೇ ಇಲ. ಇನ್ನು ನಾಯಿಪಾಡೇನು?
ಈ ನಾಯಿಗಳ ಉಗ್ರ ಸ್ವರೂಪದಲ್ಲಿ ಯಾವುದರ ಪ್ರಾಣ ಅಪಾಯದಲ್ಲಿದೆ ಎಂಬುದೇ ನನಗೆ ತಿಳಿಯಲಿಲ್ಲ. ಅಷ್ಟೇಕೆ, ನಮ್ಮ ನಾಯಿ ಯಾವುದು. ಆಗಂತುಕ ನಾಯಿ ಯಾವುದು ಎಂಬುದೇ ತಿಳಿಯಲಿಲ್ಲ. ಪರಸ್ಪರ ಕಚ್ಚಾಟದಲ್ಲಿ ಒಂದು ಇನ್ನೊಂದನ್ನು ಭಯಂಕರವಾಗಿ ಕಚ್ಚಿ ಸಾಯಿಸುವುದು ಗ್ಯಾರಂಟಿ ಎನ್ನಿಸಿ, ಜಗಳದಲ್ಲಿ ಮಧ್ಯಪ್ರವೇಶಿಸಲು ಮುಂದಾದೆ. ಬೀದಿಯಲ್ಲಿ ಬಿದ್ದಿದ್ದ ಇಟ್ಟಿಗೆ ಚೂರುಗಳಿಂದ ಹೊಡೆದೆ; ನನ್ನ ಬಗ್ಗೆ ಎಳ್ಳಷ್ಟೂ ಎಚ್ಚರವಿಲ್ಲದ ಈ ಯೋಧರು ನನ್ನ ಅಸ್ತಿತ್ವವನ್ನೇ ಗಮನಿಸದೆ ತಮ್ಮ ಕಾಳಗವನ್ನು ಮುಂದುರಿಸಿದರು. ಕಿವಿಯನ್ನು ಕಚ್ಚುವುದು, ಕುತ್ತಿಗೆಯನ್ನೇ ಹಿಡಿಯುವುದು, ಭಯಂಕರ ಆವೇಶದಿಂದ ಎರಗುವುದು. ನನಗಂತೂ ದಿಕ್ಕೆಟ್ಟಿತು. ಎಲ್ಲಿಯೋ ಹುಡುಕಿ ಒಂದು ಸಣ್ಣ ಕೋಲನ್ನು ಹಿಡಿದು, ಕಾದಾಡುವ ನಾಯಿಗಳ ಮೇಲೆ ಹೋದೆ. ಯಾವುದಕ್ಕೆ ಹೊಡೆಯಬೇಕು, ಯಾವುದಕ್ಕೆ ಬೇಡ ಎನ್ನುವ ಗೊಂದಲದಲ್ಲಿಯೇ ಹೊಡೆಯಲು ನೋಡಿದೆ.
ಜಗಳದಲ್ಲಿ ಮಧ್ಯಬರುವವರನ್ನುಯಾರೂ ಗೌರವಿಸುವುದಿಲ್ಲ. ಆದರೂ ನಾನು ಜೀವಗಳನ್ನು ಉಳಿಸುವ ಛಲ ಹೊತ್ತು ಮುನ್ನುಗ್ಗಿದೆ. ಗುರಿ ಇಟ್ಟ ಯಾವುದೋ ಒಂದು ನಾಯಿ ನನ್ನ ಮೇಲೆರಗಿ ಕಚ್ಚಿಯೇ ಬಿಟ್ಟಿತು. ಇಂಥ ಜಗಳಗಳು ನನಗೆ ಹೊಸವೇನಲ್ಲ. ಬಾಲ್ಯದಲ್ಲಿ ನಮ್ಮ ಊರಿನ ಬೀದಿಯಲ್ಲಿ ಅನೇಕ ಬಾರಿ ಜಗಳಗಳನ್ನು ನೋಡಿದ್ದೆ. ಬಹಳ ಪ್ರಸಿದ್ಧವಾದದ್ದು ಎಂದರೆ ಕಲ್ಲವ್ವ ಮತ್ತು ಅವಳ ಗಂಡ ಶಂಕರಪ್ಪ ನಡೆಸುತ್ತಿದ್ದ ಜಗಳ. ಮನೆಯೊಳಗೆ ಕಾಳಗ ನಡೆದು ಅದು ಬೀದಿಗೆ ಬರುತ್ತಿತ್ತು. ಕಲ್ಲವ್ವನ ಜುಟ್ಟು ಹಿಡಿದು ಅವಳನ್ನು ಶಂಕರಪ್ಪ ಬೀದಿಗೆ ತಂದು ಬಿಸಾಡುತ್ತಿದ್ದ. ಕಲ್ಲವ್ವ ಅಂಜುಕುಳಿಯಲ್ಲ. ಗಟ್ಟಿಯಾಗಿ ಗಂಡನ ಕಾಲುಗಳನ್ನು ಹಿಡಿದು ಕುಸ್ತಿಗೆ ಬೀಳುತ್ತಿದ್ದಳು. ಇದೂ ಕೂಡಾ ಭಯಂಕರ ಕಾಳಗವೇ. ಎಲ್ಲಿಂದ ಎಲ್ಲಿಗೋ ಹೋಗುತ್ತಿತ್ತು; ಗಂಟೆಗಟ್ಟಲೆ ವಿಸ್ತರಿಸುತ್ತಿತ್ತು. ಬೀದಿಯಲ್ಲಿ ಹಾದುಹೋಗುವವರೆಲ್ಲ ಮೋಡಿ ಹಾಕುವವರನ್ನು ನೋಡುವ ಹಾಗೆ ನೋಡುತ್ತ, ಕುಮ್ಮಕ್ಕು ಕೊಡುತ್ತ ಜಗಳ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದರು.
ನಿಜಕ್ಕೂ ಶಂಕರಪ್ಪ ರೋಸಿ ಹೋಗಿದ್ದ. ಜನ್ಮದಲ್ಲಿ ಮುಂದೆಂದೂ ಮದುವೆಯಾಗಬಾರದು ಎಂದು ದೇವರ ಮೇಲೆ ಆಣೆಹಾಕಿ ಸಾರುತ್ತಿದ್ದ.
ಪಿತ್ತ ನೆತ್ತಿಗೇರಿದಾಗ ಹೆಂಡತಿಯನ್ನು ಬಗ್ಗಿಸಿ ಬೆನ್ನಮೇಲೆ ದಬದಬ ಹೇರುತ್ತಿದ್ದ. ಇದು ಕಲ್ಲವ್ವನಿಗೆ ಹುರುಪು ತರುತ್ತಿತ್ತು. ಅವಳು ವೀರಾವೇಶದಿಂದ ಸೆಣಸುತ್ತ ಬೀದಿಗೆ ಬಂದುಬಿಡುತ್ತಿದ್ದಳು. ನಾಲ್ಕು ಜನ ನೋಡಲಿ, ಈ ನಾಮರ್ದನ ಮರ್ವಾದಿ ಮೂರುಪಾಲಾಗಲಿ ಎಂದು ಕಲ್ಲವ್ವ ಬೀದಿಯನ್ನೇ ಅಖಾಡ ಮಾಡಿಕೊಳ್ಳುತ್ತಿದ್ದಳು. ಎಷ್ಟಾದರೂ ಹಳ್ಳಿ ಹಳ್ಳಿಯೇ. ಎಲ್ಲರೂ ಬಿಟ್ಟಿ ಮನರಂಜನೆ ಪಡೆದುಕೊಂಡಮೇಲೆ ಯಾರಾದರು ಧೀರರು ಮುನ್ನುಗ್ಗಿ ಜಗಳ ಬಿಡಿಸುತ್ತಿದ್ದರು. ಗಂಡನನ್ನು ಕೆಲವರು, ಹೆಂಡತಿಯನ್ನು ಕೆಲವರು ಹಿಡಿದುಕೊಂಡು ದೂರ ದೂರ ಸಾಗಿಸಿಕೊಂಡು ಹೋಗುತ್ತಿದ್ದರು. ಕಲ್ಲವ್ವ ಎದುರು ಮನೆಯ ಗಂಗಜ್ಜಿಯ ಮನೆಕಟ್ಟೆಯ ಮೇಲೆ ಪ್ರತಿಷ್ಠಾಪನೆಗೊಳ್ಳುತ್ತಿದ್ದಳು. ಶಂಕರಪ್ಪನನ್ನು ಒಂದು ಗುಂಪು ಅವನ ಮನೆಯೊಳಕ್ಕೆ ತಳ್ಳುತ್ತಿತ್ತು. ಕೈಕೈ ದೂರವಾದರೇನು, ಗಂಟಲಿಗೆ ಶಕ್ತಿ ಇಲ್ಲವೇ? ಬೈಗುಳದ ಬಾಣಗಳು ಆಕಾಶ ಮಾರ್ಗವಾಗಿ ಚಲಿಸಿ ಪರಸ್ಪರರನ್ನು ಘಾಸಿಗೊಳಿಸುತ್ತಿದ್ದವು. ಜಗಳ ಎನ್ನುವುದು ಮಳೆಗಾಲದ ತೊರೆಯಂತೆ ಅಬ್ಬರಿಸಿ ಇಡೀ ಬೀದಿಯನ್ನು ಮುಳುಗಿಸಿಬಿಡುತ್ತಿತ್ತು.
ಯುಗಾದಿ ಹಬ್ಬದ ಮೊದಲ ದಿನ. ಊರಿಗೇ ಊರೇ ಮಾವು, ಬೇವು ಚಿಗುರಿನಿಂದ ಸಿಂಗರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಶಂಕರಪ್ಪನ ಮನೆ ಸ್ಫೋಟಿಸಿತು. ಮಾಮೂಲಿ ಕಾದಾಟ. ಹಬ್ಬದ ದಿನವೂ ಇವರು ಬಿಡಲಿಲ್ಲವಲ್ಲಎಂದು ಅನೇಕರು ಲೊಚಗುಟ್ಟಿಕೊಂಡರು. ಹೊಸ ದಿನದಲ್ಲಿ ಇದು ಸರಿಯಲ್ಲ ಬಿಡ್ರಪೊ ಎಂದರು ಕೆಲವರು. ರಣರಂಗದಲ್ಲಿ ಸೋದರ ಮಾವನೇ? ಶಂಕರಪ್ಪ ಎಂದಿನಂತೆ ವೀರಾವೇಶದಲ್ಲಿಯೇ ಇದ್ದ. ಕಲ್ಲವ್ವ ಪಟ್ಟು ಸಡಿಲಿಸದಂತೆ ಅಖಾಡಕ್ಕೆ ಇಳಿದಿದ್ದಳು. ಬೈಗುಳವನ್ನು ಸಂಗ್ರಹಿಸುವ ಜನಪದ ವಿದ್ವಾಂಸರಿಗೆ ಭರ್ಜರಿ ಸರಕು ಸಿಗುವಂತಿತ್ತು. ಮುಷ್ಟಿ ಬಿಗಿದುಕೊಂಡು ಮಂದೆಬಂದ ಶಂಕರಪ್ಪನ ಪಂಚೆ ಹಿಡಿದು ಜಗ್ಗಿ ಮಾತುಗಳನ್ನು ಉಗ್ಗಿದಳು ಕಲ್ಲವ್ವ. ಪಂಚೆ ಬಿಚ್ಚಿದರೆ ಗತಿ ಏನೆಂದು ಹೆದರಿದ ಶಂಕರಪ್ಪ ಸ್ವಲ್ಪ ಹಿಂದೆ ಸರಿದ. ಈ ಅವಕಾಶವನ್ನು ಬಳಸಿಕೊಂಡು ಕಲ್ಲವ್ವ ಜೋರಾಗಿ ಅವನನ್ನು ಹಿಂದಕ್ಕೆ ತಳ್ಳಿದಳು. ಬೀಳಬೇಕಾಗಿದ್ದ ಶಂಕರಪ್ಪ ಅದು ಹ್ಯಾಗೊ ಸಮತೋಲ ಕಾಯ್ದುಕೊಂಡು ನಿಂತ. ಉಕ್ಕಿಬಂದ ಸಿಟ್ಟಿಗೆ ಹೊರದಾರಿ ತೋರಿಸುವಂತೆ ಶಂಕರಪ್ಪ, ಮೂರೂಬಿಟ್ಟ ಹಾದರಗಿತ್ತಿʼಎಂದ. ನಾನು ಹಾದರಗಿತ್ತಿಯಾದರೆ, ನೀನೆಂತನೋ ನಾಮರ್ದ, ಗಂಡಸ್ತನ ಇಲ್ಲದ ಗಂಡಸು, ನಿನ್ನನ್ನು ಕಂಡಿಲ್ಲವಾ ನಾನುʼಎಂದು ನೆಲಕ್ಕೆ ಉಗಿದಳು.
ಈ ಮಾತು ಶಂಕರಪ್ಪನ ಮರ್ಮಕ್ಕೆ ತಾಗಿದಂತಾಯಿತು. ಒಂದು ಕ್ಷಣ ಬೆಪ್ಪಾದವನಂತೆ, ಗಲಿಬಿಲಿಗೊಂಡ. ಮತ್ತೆ ಅವಳನ್ನೇ ದುರುಗುಟ್ಟಿ ನೋಡಿದ. ಮತ್ತೆ ಮಾತಾಡಲಿಲ್ಲ. ʼಹಡಬೆಗುಟ್ಟಿದಳೇ, ಇದನ್ನ ಇಲ್ಲಿಗೇ ಬಿಡಲ್ಲ, ಪಂಚಾಯಿತಿ ಕಟ್ಟೆ ಹತ್ ಸ್ತಿನೀʼ ಎಂದು ಅಬ್ಬರಿಸಿದ. ಕುತೂಹಲದಿಂದ ನೋಡುತ್ತಿದ್ದವರಿಗೆ ಕಲ್ಲವ್ವನ ಮಾತು ಅನೇಕ ಅರ್ಥಗಳನ್ನು ಹೊಮ್ಮಿಸಿತು. ತಾರುಣ್ಯವನ್ನು ತುಳುಕಿಸುತ್ತಿದ್ದ ಅಗಸರ ಹನುಮ ರಭಸದಿಂದ ಮುಂದೆ ಬಂದು, ʼಏ ನಡಿಯಣ್ಣೊ, ಅಬ್ಬದ್ ದಿನ ಇದೆಂತದುʼಎಂದು ಕಲ್ಲಪ್ಪನನ್ನು ದೂರ ಸರಿಸಲು ನೋಡಿದ. ಕ್ಷೌರಿಕರ ತಿಪ್ಪಣ, ʼಏ ನಡಿಯಮ್ಮೊ ಒಳಗೆ ನಡಿ ಎಂತಾ ಮಾತಾಡ್ತಿʼ ಎಂದು ಕಲ್ಲವ್ವನ ರಟ್ಟೆ ಹಿಡಿದು ದಬ್ಬಲು ನೋಡಿದ.
ಯಾರು ಮಧ್ಯಪ್ರವೇಶ ಮಾಡಿದರೂ, ಶಂಕರಪ್ಪ ಪಂಚಾಯಿತಿಯ ಪಟ್ಟು ಸಡಿಲಿಸಲಿಲ್ಲ. ಅಂತೂ ಅವತ್ತು ರಾತ್ರಿ ಪಂಚಾತಿ ಸೇರ್ತು. ಕಲ್ಲವ್ವ ಗಂಡನ ಗಂಡಸ್ತನದ ಬಗ್ಗೆ ಮಾತಾಡಿದ್ದು ತಪ್ಪು, ಕಲ್ಲಪ್ಪನೂ ಗೆರೆ ದಾಟಿ ಮಾತಾಡಬಾರ್ದಿತ್ತು ಎಂದೆಲ್ಲ ತೀರ್ಪು ಹೇಳಿ ಇಬ್ಬರಿಗೂ ದಂಡ ಹಾಕಿದರು. ಸಂಸಾರ ಅಂದ ಮೇಲೆ ಇಂತವೆಲ್ಲ ಇರ್ತವೆ, ತೂಗಿಸ್ಕಂಡ್ ಓಗ್ರಿ- ಅಂತ ಉಪದೇಶವನ್ನೂ ಕೊಟ್ಟರು. ಇದಾದ ಮೇಲೆ ಕಲ್ಲವ್ವನ ಕುಟುಂಬದಲ್ಲಿ ಒಂದು ದೊಡ್ಡ ಬದಲಾವಣೆಯಾಯ್ತು. ಶಂಕರಪ್ಪ ಬೇಸಾಯವನ್ನು ಕೈಬಿಟ್ಟು, ಎತ್ತಿನ ಮಾರಾಟಕ್ಕೆ ತೊಡಗಿಕೊಂಡ. ಊರೂರು ಅಲೆಯುವುದು, ಎತ್ತುಗಳನ್ನು ಕೊಳ್ಳುವುದು, ಜಾತ್ರೆಗಳಲ್ಲಿ ಮಾರುವುದು. ಮನೆಯಲ್ಲಿರುವುದೇ ಅಪರೂಪವಾಯ್ತು.
ತಿಂಗಳಲ್ಲಿ ಒಂದೆರಡು ದಿನ ಮನೆಯಲ್ಲಿ ತಂಗಿದರೆ, ಕಲ್ಲವ್ವ ಗಂಡನನ್ನು ಬಹಳ ಆದರದಿಂದ ಕಾಣುತ್ತಿದ್ದಳು. ಊರಿನಲ್ಲಾದ ಬದಲಾವಣೆ ಎಂದರೆ, ಅಗಸರ ಹನುಮ ಮತ್ತು ಕ್ಷೌರಿಕರ ತಿಪ್ಪಣ್ಣ ಮೊದಲ್ಗೊಂಡು ಅನೇಕ ತರುಣರು ಕಲ್ಲವ್ವನ ಮನೆಗೆ ಬಂದು ಹೋಗುವುದು ಹೆಚ್ಚಾಯಿತು. ಬರುವವರಿಗೆ ಹಗಲು ರಾತ್ರಿ ಎನ್ನುವ ಭೇದ ಇರುತ್ತಿರಲಿಲ್ಲ. ಕಲ್ಲವ್ವನ ಸಿಂಗಾರ, ಒನಪು ಒಯ್ಯಾರಗಳು ಊರು ತುಂಬಿದವು. ಅವಳ ಯೌವನ ಹೆಚ್ಚಿನ ಕಾಂತಿ ಪಡೆದುಕೊಂಡಿತು.
ನಾನು ನಾಯಿಯಿಂದ ಕಚ್ಚಿಸಿಕೊಂಡು, ಗಾಯಗೊಂಡು, ರಕ್ತ ಸುರಿಯುವ ಕಾಲನ್ನು ಎಚ್ಚರಿಕೆಯಿಂದ ಎತ್ತಿಡುತ್ತ, ಕುಂಟುತ್ತ ಒಳಗೆ ಬಂದೆ. ಜಗತ್ತಿನಲ್ಲಿರುವ ಅತ್ಯಂತ ಮೂರ್ಖಪ್ರಾಣಿಯನ್ನು ನೋಡುವಂತೆ ನನ್ನನ್ನು ಅತ್ಯಂತ ತಿರಸ್ಕಾರದಿಂದ ನೋಡಿದ ಸುಮುಖಿ, ʼನಿಮಗೇನಾದರೂ ಬುದ್ಧಿ ಇದೆಯಾ? ಬೀದಿನಾಯಿಗಳ ಜಗಳ ಬಿಡಿಸಲು ಹೋಗಿದ್ದೀರಲ್ಲಾ, ತಲೆಯಲ್ಲಿ ಸಗಣಿ ತುಂಬಿಕೊಂಡಿದ್ದೀರಾ?ʼಎಂದು ಬಹಳ ಗೌರವವಾಗಿಯೇ ಕೇಳಿದಳು. ಅವಳು ಹೇಳುವ ಮಾತಿನಲ್ಲಿ ಅರ್ಥವಿದೆಯೆಂದೆನಿಸಿ, ʼಹೌದಲ್ಲಾ, ನಾನು ಯೋಚಿಸಲೇ ಇಲ್ಲವಲ್ಲಾʼಎಂದು ಬ್ಯಾಂಡೇಜನ್ನು ಹುಡುಕುತ್ತಾ ಹೋದೆ. ಅಮ್ಮ ಗಾಬರಿಯಿಂದ ಹತ್ತಿರಬಂದರು. ರಕ್ತವನ್ನು ನೋಡಿ ಹೌಹಾರಿದರು.
ಇಲಾಜು ಎಲ್ಲ ಮುಗಿದ ಮೇಲೆ ಅವರ ಕೋಪ ನೆತ್ತಿಗೇರಿತು. ʼನನ್ನ ಮಗನನ್ನು ಹಿಂಗೆ ಬೈತೀಯಲ್ಲಾ, ನಿನ್ನ ತಲೆಯಲ್ಲಿ ಸಗಣಿ ತುಂಬಿಕೊಂಡಿದೀಯಾ?ʼ ಅತ್ತೆ-ಸೊಸೆಯ ಕದನಕ್ಕೆ ಒಂದು ಕಿಡಿ ಸಾಕಲ್ಲವೇ? ನಮ್ಮಮ್ಮ ಎಸೆದಿದ್ದು ಬೆಂಕಿಯ ಉಂಡೆಯನ್ನೇ. ಒಲೆಯಲ್ಲ, ಧರೆಯೇ ಹತ್ತಿ ಉರಿಯಿತು. ರಣಾಂಗಣ ನಮ್ಮ ಮನೆಯಲ್ಲಿಯೇ ತೆರೆದುಕೊಂಡಿತು. ಅಕ್ಷೋಹಿಣಿ ಅಕ್ಷೋಹಿಣಿ ಸೈನ್ಯದ ಕಾದಾಟಕ್ಕಿಂತ ಇದೇನೂ ಕಡಿಮೆ ಇರಲಿಲ್ಲ. ತಲೆಗಳುರುಳಲಿಲ್ಲ ಎನ್ನುವುದೊಂದೇ ಸಮಾಧಾನಕರ ಅಂಶ. ರಕ್ತದ ಕಾಲುವೆ ನಾನು ಒಳಗೆ ಕಾಲಿಟ್ಟಾಗಲೇ ಹರಿಯಲು ಆರಂಭಿಸಿತ್ತಲ್ಲ.
ನಾಯಿ ಕಚ್ಚಿದ ನನ್ನ ಗಾಯ ಉರಿಯಲು ಸುರುವಾಯಿತು. ನೋವು ಒಳಗೆಲ್ಲ ಹಬ್ಬಿತು. ಉರಿ ಉರಿ. ಇದೇನು ಅತ್ತೆ-ಸೊಸೆಯರ ಜಗಳ ಹೊಸದಲ್ಲ. ಆಗಾಗ ನಡೆಯುತ್ತಲೇ ಇತ್ತು. ಸುಮುಖಿ ಬೇರೆ ಜಾತಿಯವಳು ಎಂಬುದೇ ನನ್ನಮ್ಮನ ಕೋಪಕ್ಕೆ ಪ್ರಮುಖ ಕಾರಣ. ಹೆಜ್ಜೆ ಹೆಜ್ಜೆಗೂ ಅದನ್ನು ಆಡಿತೋರಿಸಿ ಕದನವನ್ನು ಹುಟ್ಟುಹಾಕುತ್ತಿದ್ದಳು. ಕದನದ ಆರಂಭ ತಿಳಿಯುತ್ತಿತ್ತೇ ಹೊರತು, ಕೊನೆ ತಿಳಿಯುತ್ತಿರಲಿಲ್ಲ. ಸ್ವಲ್ಪಕದನ ವಿರಾಮ ಸಿಕ್ಕರೆ ಸಾಕು ಎಂದು ಕಾಯುವ ಪರಿಸ್ಥಿತಿಯನ್ನು ಸದಾ ಎದುರು ನೋಡುವಂತಿರುತ್ತಿತ್ತು.
ಇಂಥ ವ್ಯಾಜ್ಯವನ್ನು ನಾನು ಕೆ.ಸದಾಶಿವ ಅವರ ಕತೆಗಳಲ್ಲಿ ಓದಿದ್ದೆ. ಅಲ್ಲಿಯೂ ಅತ್ತೆ-ಸೊಸೆಯ ಜಗಳವೇ. ಗಂಡ ಎನ್ನುವ ಪ್ರಾಣಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಬದುಕನ್ನು ನಶ್ವರ ಎನ್ನುವವರು ಇಂಥ ಜಗಳದಿಂದ ನೊಂದು, ಕುಟುಂಬವನ್ನೇ ತೊರೆದು ಹೋದ ಹೇಡಿಗಳು., ಇದ್ದು ಈಸುತ್ತಾರೆ, ಜಯಿಸುತ್ತಾರೆ, ಧೀರರು, ಸದಾಶಿವ, ಸಾರಿ, ಸದಾಶಿವನ ಕಥಾ ನಾಯಕ ಹೇಡಿಯೋ, ಧೀರನೋ? ಈ ಪ್ರಶ್ನೆ ಸ್ವತಃ ಸದಾಶಿವರನ್ನು ಕಾಡಿತೋ ಇಲ್ಲವೊ, ಅಂತೂ ಈ ಜಗಳವನ್ನೇ ಕೇಂದ್ರ ಮಾಡಿಕೊಂಡು ಅವರು ಅನೇಕ ಕತೆಗಳನ್ನು ಬರೆದರು.
ಒಂದು ಕತೆಯಲ್ಲಂತೂ ಈ ಗಂಡನ ಹೆಣವನ್ನೇ ನಡುಮನೆಯಲ್ಲಿ ಇಟ್ಟುಕೊಂಡು ಅತ್ತೆ-ಸೊಸೆ ಕಾದಾಡಿದರಲ್ಲ. ಆಗಲೂ ಸದಾಶಿವ ಸುಮ್ಮನೇ ಇದ್ದರು. ಕತೆ ಬರೆದು ಅನಂತಮೂರ್ತಿಗೆ ತೋರಿಸಿದರು. ಅನಂತಮೂರ್ತಿ, ʼನಮ್ಮ ಸದಾಶಿವ ದೊಡ್ಡವನುʼಎಂದರು. ʼಜಗತ್ತಿನಲ್ಲಿ ಸಂಸಾರದ ಗುಟ್ಟು ತಿಳಿದಿರೋದು ನಿನ್ನೊಬ್ಬನಿಗೇ ಕಣೋʼ ಎಂದರು. ಒಂದು ಕ್ಷಣ ಮೌನವಾದರು. ಗಂಭೀರವಾಗಿ ಚಿಂತಿಸಿದರು. ನಂತರ ನಿಧಾನಕ್ಕೆ,ʼಈ ಮಾಲೇರು ಇದ್ದಾರಲ್ಲಾ ಅವರಿಗೆ ಅಪಾರ ಸಹನೆ ಕಣೊ, ನಿನ್ನ ಸಹನೆಯ ಮೂಲ ಅಲ್ಲಿದೆʼ ಎಂದು ನಕ್ಕರು. ನಂತರ ಗಂಭೀರ ದನಿಯಲ್ಲಿ, ʼಮಾಲೇರನ್ನೂ ಒಳಗೊಂಡಂತೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜಾತಿಗಳ ಸಾಂಸ್ಕೃತಿಕ ಅಧ್ಯಯನ ಅಗತ್ಯವಾಗಿ ನಡೆಯಬೇಕು ಕಣಯ್ಯʼ ಎಂದರು.
ಸದಾಶಿವ ನಕ್ಕು,ʼಬಾರೋ ಅನಂತು, ಮೊದಲು ಒಂದು ಪೆಗ್ ಹಾಕೋಣ, ನಂತರ ಸಾಂಸ್ಕೃತಿಕ ಅಧ್ಯಯನʼ ಎಂದು ಬಾರಿಗೆ ಕರೆದುಕೊಂಡು ಹೋದ. ಒಂದಲ್ಲ ಹತ್ತಾರು ಸಲ ಬಾರಿಗೆ ಹೋಗಿಬಂದರೂ, ಚರ್ಚೆ ಮುಕ್ತಾಯ ಕಾಣಲಿಲ್ಲ. ಸಾಂಸ್ಕೃತಿಕ ಅಧ್ಯಯನವೂ ಆರಂಭವಾಗಲಿಲ್ಲ. ಆದರೆ ಒಂದು ದಿನದ ಕಾವೇರಿದ ಚರ್ಚೆಯಲ್ಲಿ ಸದಾಶಿವ ಒಂದು ಪ್ರಶ್ನೆಯನ್ನು ಕೇಳಿದರು, ʼಅಲ್ಲೊ ಅನಂತು, ಸಂಸಾರ ಎಂದರೆ ಯಾಕಿಷ್ಟು ರಗಳೆ, ರಂಪಾಟ?ʼ ಅನಂತಮೂರ್ತಿ ಗಾಂಭೀರ್ಯ ತುಂಬಿಕೊಂಡು, ʼರಗಳೆಯೂ ಅಲ್ಲ, ರಂಪಾಟವೂ ಅಲ್ಲ; ಅದು ಒಳಗಿನ ಕೋಲಾಹಲ, ಮಾಯಾ ಕೋಲಾಹಲ.ʼಜಗತ್ತೇ ನಡುಗುವಂತೆ ಇಬ್ಬರೂ ನಕ್ಕರು. ಕೊನೆಗೂ ಒಂದು ಸಂಜೆ ನಮ್ಮ ನಾಯಿ ಮನೆಗೆ ಬಂತು. ಪಾಪ, ಅದರ ಒಂದು ಕಿವಿಯನ್ನು ಇನ್ನೊಂದು ನಾಯಿ ಬಲವಾಗಿಯೇ ಕಚ್ಚಿತ್ತು. ಗಾಯ ರಣಾರಂಪವಾಗಿತ್ತು. ತೀರ ಕುಗ್ಗಿ ಹೋಗಿದ್ದ ನಮ್ಮ ನಾಯಿ, ಸೋತ ಸೈನಿಕನಂತೆ ಎದುರಿಗೆ ನಿಂತು ಅತ್ಯಂತ ವಿನಯದಿಂದ ಬಾಲವಾಡಿಸಿತು.