ನ್ಯೂಸ್

ಕೊಡಗಿನ ಕುವರಿ ದೀಪಾ

| ಸುನಿಲ್ ಪೊನ್ನೇಟಿ ಮಡಿಕೇರಿ

ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಸಣ್ಣ ಕತೆಗಳ ಸಂಕಲನವನ್ನು ಇಂಗ್ಲಿಷ್​ಗೆ ಅನುವಾದಿಸಿದವರು ಮಡಿಕೇರಿಯ ದೀಪಾ ಭಾಸ್ತಿ. ಹಾಗಾಗಿ ಲಂಡನ್​ನಲ್ಲಿ ಬುಕರ್ ಪ್ರಶಸ್ತಿ ಘೊಷಣೆ ಆಗುತ್ತಿದ್ದಂತೆ ಕೊಡಗಿನ ಸಾಹಿತ್ಯ ವಲಯದಲ್ಲೂ ಸಂಭ್ರಮ ಮನೆ ಮಾಡಿದೆ. ಕನ್ನಡಕ್ಕೆ ಮೊದಲ ಬುಕರ್ ಪ್ರಶಸ್ತಿ ಬಂದಿರುವ ಹಿಂದೆ ದೀಪಾ ಅವರ ಶ್ರಮಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ದೀಪಾ ಭಾಸ್ತಿ ಮಡಿಕೇರಿಯವರು. ಖ್ಯಾತ ಕತೆಗಾರ್ತಿ ಕೊಡಗಿನ ಗೌರಮ್ಮನವರ ಕತೆಗಳನ್ನು ಇಂಗಿಷ್​ಗೆ ಅನುವಾದ ಮಾಡುವ ಮೂಲಕ ಜಿಲ್ಲೆಯ ಪ್ರತಿಭಾವಂತ ಕತೆಗಾರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇವರದ್ದು. ಕೋಟ ಶಿವರಾಮ ಕಾರಂತರ ಕತೆಗಳು ಕೂಡ ದೀಪಾ ಮೂಲಕ ಇಂಗ್ಲಿಷ್​ಗೆ ಅನುವಾದಗೊಂಡಿವೆ.

ದೀಪಾ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಪಿಯುಸಿ ತನಕ ಓದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಪತ್ರಕರ್ತೆ ಆಗಿದ್ದ ದೀಪಾ ಪ್ರಸ್ತುತ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಾಂಸ್ಕೃತಿಕ ವಿಮರ್ಶೆ, ಪ್ರಬಂಧಗಳು, ಅಂಕಣಗಳು, ಲೇಖನಗಳು ದೇಶ-ವಿದೇಶದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ದೀಪಾ ಮಡಿಕೇರಿ ಸಮೀಪ ಪತಿಯೊಂದಿಗೆ ನೆಲೆಸಿದ್ದಾರೆ. ಕೃಷಿಯಲ್ಲೂ ಆಸಕ್ತಿ ಇರುವ ಇವರು ಬಿಡುವು ದೊರೆತಾಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೂ ಇದೆ.

ನನ್ನ ಮಗಳು ಬುದ್ಧಿವಂತ ಹುಡುಗಿ. ಓದಿದ್ದೆಲ್ಲ ಆಂಗ್ಲಮಾಧ್ಯಮದಲ್ಲೇ. ಅಮೆರಿಕ ಮತ್ತು ಇಂಗ್ಲೆಂಡ್ ಇಂಗ್ಲಿಷ್ ಆಕೆಗೆ ಸುಲಲಿತವಾಗಿ ಬರುತ್ತದೆ. ಈಕೆಯ ಮೇಲೆ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಆಂಗ್ಲ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅವರ ಪ್ರಭಾವ ಸಾಕಷ್ಟು ಇದೆ. ಮಂಗಳೂರಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದಳು. ಈ ಹಂತಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾಳೆ. ಈಕೆಗೆ ಬುಕರ್ ಪ್ರಶಸ್ತಿ ಬಂದಿರುವುದು ತುಂಬ ಖುಷಿ ಆಗಿದೆ. | ಬಿ.ಎನ್.ಪ್ರಕಾಶ್ ದೀಪಾ ಭಾಸ್ತಿ ತಂದೆ