ನ್ಯೂಸ್

ಸಾರ್ವತ್ರಿಕ ರಜೆ ಪಡೆದರೆ ಸಾಂರ್ದಭಿಕ ಸೂಟಿ ಕಡಿತ; ಭಾನುವಾರ, 2 ಮತ್ತು 4ನೇ ಶನಿವಾರ ಪೊಲೀಸ್ ಸಿಬ್ಬಂದಿಗೆ ರಜೆ

ಬೆಂಗಳೂರು: ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲ ಸಾಮರ್ಥ್ಯ ಹೆಚ್ಚಳ ಹಾಗೂ ಪೊಲೀಸರಿಗೆ ರಜೆ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಡಿಜಿಪಿ ಪ್ರವೀಣ್ ಸೂದ್ ಹೊಸ ಆದೇಶ ಹೊರಡಿಸಿದ್ದು, ಭಾನುವಾರ, 2ನೇ ಮತ್ತು 4ನೇ ಶನಿವಾರದ ಸಾರ್ವತ್ರಿಕ ರಜೆ ಪಡೆಯುವ ಸಿಬ್ಬಂದಿಗೆ 15 ಸಾಂರ್ದಭಿಕ ರಜೆಗಳ ಬದಲು 10 ರಜೆ ನಿಗದಿಪಡಿಸಲಾಗಿದೆ.

ಕಾರ್ಯಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಎಲ್ಲ ಭಾನುವಾರ, 2ನೇ ಮತ್ತು 4ನೇ ಶನಿವಾರಗಳ ಸಾರ್ವತ್ರಿಕ ರಜೆ ಸೌಲಭ್ಯ ಒದಗಿಸುವಂತೆ ಆದೇಶಿಸಲಾಗಿದೆ. ಕಾರ್ಯಕಾರಿ ಹುದ್ದೆಗಳಲ್ಲಿರುವ ಸಿಬ್ಬಂದಿಗೆ ಮಾಸಿಕ 6 ಅಥವಾ 7 ರಜೆ (ತಿಂಗಳಲ್ಲಿ 5 ಭಾನುವಾರ ಇದ್ದರೆ) ಕೊಟ್ಟರೆ ದೈನಂದಿನ ಕಾರ್ಯಕಲಾಪಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಇಂತಹ ಸಿಬ್ಬಂದಿಗೆ ಮಾಸಿಕ 2 ವಾರದ ಭತ್ಯೆ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ.

10ಕ್ಕೆ ಇಳಿಸಿ ಮತ್ತೆ 15ಕ್ಕೆ ಏರಿಸಿತ್ತು

2019ರಲ್ಲಿ 2ನೇ ಮತ್ತು 4ನೇ ಶನಿವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದರಿಂದ ಸರ್ಕಾರಿ ನೌಕರರಿಗಿದ್ದ ಸಾಂರ್ದಭಿಕ ರಜೆಗಳನ್ನು 15ರಿಂದ 10ಕ್ಕೆ ಇಳಿಕೆ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ, ಸರಿಯಾಗಿ ವಾರದ ರಜೆಯನ್ನೇ ಪಡೆಯಲು ಅವಕಾಶವಿಲ್ಲದ ಪೊಲೀಸ್, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮೂರೂ ಇಲಾಖೆಗಳ ನೌಕರರಿಗೆ ಮಾತ್ರ 2020ರಿಂದ ಅನ್ವಯ ಆಗುವಂತೆ ಮತ್ತೆ 15 ದಿನಕ್ಕೆ ಸಾಂರ್ದಭಿಕ ರಜೆಗಳನ್ನು ಏರಿಸಲಾಗಿತ್ತು.

ಮಾಸಿಕ ಕನಿಷ್ಟ 4 ವಾರದ ರಜೆ

ಜಿಲ್ಲೆ, ಪೊಲೀಸ್ ಕಮಿಷನರೇಟ್, ಕೆಎಸ್​ಆರ್​ಪಿ ಮತ್ತು ಕೆಎಸ್​ಐಎಸ್​ಎಫ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಕಾನ್​ಸ್ಟೇಬಲ್, ಹೆಡ್ ಕಾನ್​ಸ್ಟೇಬಲ್​ಗಳಿಗೆ ಎಸ್​ಪಿ ದರ್ಜೆ ಅಧಿಕಾರಿಯಿಂದ ಮಾಸಿಕ ಕನಿಷ್ಟ 4 ವಾರದ ರಜೆ ನೀಡಲು ಅನುಮತಿ ನೀಡಲಾಗಿದೆ.

ಪೊಲೀಸರಿಗೂ ಭಾವನೆಗಳಿವೆ. ಮಕ್ಕಳ ಶಾಲಾ ಪ್ರವೇಶಾತಿ, ಬ್ಯಾಂಕ್​ನಲ್ಲಿ ಕೆಲಸ, ಸರ್ಕಾರದ ಇತರ ಇಲಾಖೆಯ ಕಚೇರಿಗಳಲ್ಲಿ ವೈಯಕ್ತಿಕ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿರುತ್ತವೆ. ಹೊಸ ಪದ್ಧತಿಯಂತೆ ಸಾರ್ವತ್ರಿಕ ರಜೆ ದಿನದಂತೆ ಕಡ್ಡಾಯವಾಗಿ ರಜೆ ಪಡೆಯಬೇಕು ಎಂಬುದು ಸರಿಯಲ್ಲ. ಹೊಸ ನಿಯಮದಿಂದ ಪೊಲೀಸರ ಮಾನಸಿಕತೆಯ ಮೇಲೆ ತುಂಬಾ ಪೆಟ್ಟು ಬೀಳುತ್ತದೆ.| ಪೊಲೀಸ್ ಹೆಡ್ ಕಾನ್​ಸ್ಟೇಬಲ್

ಹೊಸ ಆದೇಶದಲ್ಲಿ ಏನಿದೆ?

  • ಕಾನ್​ಸ್ಟೇಬಲ್ ಹಾಗೂ ಹೆಡ್ ಕಾನ್​ಸ್ಟೇಬಲ್​ಗಳು ವಾರದ ಸಾರ್ವತ್ರಿಕ ರಜೆ ಪಡೆಯಲು ಅರ್ಹರು. ರಜೆ ಪಡೆಯಲು ಸಾಧ್ಯವಾಗದಿದ್ದಲ್ಲಿ ಅವರಿಗೆ ವಾರದ ಭತ್ಯೆ ಮಂಜೂರು ಮಾಡಬಹುದು.
  • ಸಾಂರ್ದಭಿಕ ರಜೆಯನ್ನು ಮೊದಲಿದ್ದ 15 ದಿನಗಳ ಬದಲಿಗೆ 10 ದಿನಕ್ಕೆ ಕಡಿತಗೊಳಿಸಲಾಗಿದೆ.
  • ಸಾರ್ವತ್ರಿಕ ರಜೆ ಅನುಭವಿಸುವ ಸಿಬ್ಬಂದಿ 10 ಸಾಂರ್ದಭಿಕ ರಜೆ ಮತ್ತು 2 ದಿನ ನಿರ್ಬಂಧಿತ ರಜೆ ಪಡೆಯಲು ಅರ್ಹರಿದ್ದಾರೆ.
  • ಜಿಲ್ಲೆ, ಪೊಲೀಸ್ ಕಮಿಷನರೇಟ್, ಕೆಎಸ್​ಆರ್​ಪಿ ಮತ್ತು ಕೆಎಸ್​ಐಎಸ್​ಎಫ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾಸಿಕ 2 ವಾರದ ರಜೆ ಭತ್ಯೆ ಪಡೆಯಲು ಅನುಮತಿ ನೀಡಲಾಗಿದೆ (5 ಭಾನುವಾರ ಇರುವ ತಿಂಗಳಲ್ಲಿ 3 ವಾರದ ರಜೆ ಭತ್ಯೆ ಪಡೆಯಬಹುದಾಗಿದೆ).