ನ್ಯೂಸ್

16ರಂದು ಸಮರ್ಪಣೆ ಕಾರ್ಯಕ್ರಮ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದಿಂದ ಆ.16ರ ಸಂಜೆ 5ಕ್ಕೆ ತರಳಬಾಳು ಹಾಸ್ಟೆಲ್ ಹಿಂಭಾಗದಲ್ಲಿ ಆಯೋಜಿಸುವ ಸಮರ್ಪಣೆ ಎಂಬ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸನ್ಮಾನ, ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಬಿ.ಎಸ್.ಯಡಿಯೂರಪ್ಪ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಮೈತ್ರಾದೇವಿ ಯಡಿಯೂರಪ್ಪ ಂದು ಹೆಸರು ಇಡಲಾಗಿದೆ. ಸಂಘದ ಆಡಳಿತ ಕಚೇರಿ ಉದ್ಘಾಟನೆ, ಪ್ರತಿಭಾ ಪುರಸ್ಕಾರ ವಿತರಣೆ ಇದೇ ಸಂದರ್ಭ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಸ್ಟೆಲ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು ಮತ್ತು ಸಮಾಜದವರಿಗೆ ಕೃತಜ್ಞತೆ ಸಮರ್ಪಿಸಲಾಗುವುದು. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣಾ ಕಾರ್ಯಕ್ರಮವೂ ಇದೇ ವೇಳೆ ನಡೆಯಲಿದೆ. ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿದ್ಯಾರ್ಥಿ ನಿಲಯವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆಡಳಿತ ಕಚೇರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು ಎಂದರು.

ಶಾಸಕರಾದ ಬಿ.ಕೆ ಸಂಗಮೇಶ್ವರ್, ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕರು, ವಿಧಾನ ಪರಿಷತ್ ಮಾಜಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವರು. ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಗೌರವಾಧ್ಯಕ್ಷ ಸಿ.ಜಿ.ಪರಮೇಶ್ವರಪ್ಪ, ನಿರ್ದೇಶಕರಾದ ಕೆ.ಮೋಹನ್‌ಕುಮಾರ್, ಕೆ. ಪ್ರಸನ್ನ, ಕೆ.ವಿ.ಲೋಕೇಶಪ್ಪ, ಎ.ಜಿ.ಸಿದ್ಧಣ್ಣ, ಡಾ.ಟಿ.ಎಚ್.ನಟರಾಜ, ಎನ್.ಎಸ್.ಲವಕುಮಾರಸ್ವಾಮಿ, ಎಚ್.ಎಸ್.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.