ಸೊರಬದ ಜಡೆ ಸಂಸ್ಥಾನ ಮಠದಲ್ಲಿ ಲಿಂಗೈಕ್ಯ ಕುಮಾರಪ್ರಭು ಸ್ವಾಮೀಜಿ 26ನೇ ಪುಣ್ಯಾರಾಧನೆ ಜರುಗಿತು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಗುರುಬಸವ ದೇವರು, ಶ್ರೀ ನೀಲಕಂಠ ಸ್ವಾಮೀಜಿ ಇತರರಿದ್ದರು. 
ನ್ಯೂಸ್

ಸಮಾಜದ ಏಳಿಗೆಗೆ ಜೀವನ ಸಮರ್ಪಣೆ

ಸೊರಬ: ಸಮಾಜದ ಏಳಿಗೆ, ಭಕ್ತರ ಉದ್ಧಾರಕ್ಕೆ ಜೀವನ ಸಮರ್ಪಿಸಿದವರು ಜಡೆ ಮಠದ ಲಿಂಗೈಕ್ಯ ಶ್ರೀ ಕುಮಾರಪ್ರಭು ಸ್ವಾಮೀಜಿ ಎಂದು ಮೂಡಿ ವಿರಕ್ತಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಸಂಸ್ಥಾನ ಮಠದ ಶ್ರೀ ಸಿದ್ದವೃಷಭೇಂದ್ರ ಸಭಾಭವನದಲ್ಲಿ ಸಂಸ್ಥಾನ ಮಠ ಜಡೆ, ಮುರುಘಾಮಠ ಸೊರಬ, ಯುವ ವೇದಿಕೆ ಜಡೆ, ಸಾರ್ವಜನಿಕ ಭಕ್ತಮಂಡಳಿ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ, ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಕುಮಾರಪ್ರಭು ಸ್ವಾಮೀಜಿ 26ನೇ ಪುಣ್ಯಾರಾಧನೆ, ಬಸಪ್ಪ ಶೆಟ್ಟರ ಸ್ಮರಣೆ, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಕುಮಾರಪ್ರಭು ಸ್ವಾಮೀಜಿ ಅವರು ಭಕ್ತರನ್ನು ಸಮಾಜದ ಆಸ್ತಿಯಾಗಿ ನಿರ್ಮಾಣ ಮಾಡಿದರು. ತ್ಯಾಗ, ಸದೃಢತೆ, ಸಂಯಮ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದರು.

ಬಬಲೇಶ್ವರ ಶ್ರೀ ಗುರುಬಸವ ದೇವರು ಮಾತನಾಡಿ, ಮಕ್ಕಳು ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಗುರುಹಿರಿಯರನ್ನು ಗೌರವದಿಂದ ಕಾಣಬೇಕು. ಸಮಾಜವು ನಿಮ್ಮನ್ನು ಗುರುತಿಸಿ ಗೌರವಿಸುವಂತೆ ಸಾಧನೆ ಮಾಡಬೇಕು ಎಂದು ಹೇಳಿದರು.

ಬೆಳಗ್ಗೆ ಶ್ರೀ ಸಿದ್ದವೃಷಭೇಂದ್ರ ಮಹಾಶಿವಯೋಗಿಗಳ ಗದ್ದುಗೆ, ಕುಮಾರಪ್ರಭು ಸ್ವಾಮೀಜಿ ಗದ್ದುಗೆಗೆ ಜಂಗಮ ಪಾದಪೂಜೆ, ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಕುಮಾರಪ್ರಭು ಸ್ವಾಮೀಜಿ, ಬಸಪ್ಪ ಶೆಟ್ಟರ ಹಾಗೂ ಭುವನೇಶ್ವರಿ ಭಾವಚಿತ್ರದ ರಾಜಬೀದಿ ಉತ್ಸವ ನಡೆಯಿತು.

ಮಮದಾಪುರದ ಶ್ರೀ ಮೌನಮಲ್ಲಿನಾಥ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕುಮಾರ ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ,  ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಅಬಲೂರು ಶ್ರೀ ಗಂಗಾಧರ ದೇವರು, ನಾಗರಾಜ ಗೌಡ, ಅಕ್ಕನ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.