ನ್ಯೂಸ್

ರಾಷ್ಟ್ರನಾಯಕರಿಗೆ ಗೌರವ ಸಮರ್ಪಣೆ ನಾಳೆ: ಸಂಸತ್​ನಲ್ಲಿ ಕೋಲಾರದ ಸ್ಫೂರ್ತಿ ಭಾಷಣ

ಕೋಲಾರ: "ರಾಷ್ಟ್ರನಾಯಕರಿಗೆ ಸಂಸತ್​ನಲ್ಲಿ ಗೌರವ ಸಮರ್ಪಣೆ'' ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದಿಂದ ಕೋಲಾರದ ಎಂ. ಸ್ಫೂರ್ತಿ ಆಯ್ಕೆಯಾಗಿದ್ದು, ನಾಳೆ(ನ.19) ಸಂಸತ್​ನಲ್ಲಿ ಭಾಷಣ ಮಾಡಲಿದ್ದಾರೆ.

ಶಿಕ್ಷಣ ಸಚಿವಾಲಯ, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವಾಲಯ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಸಂಸದೀಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿವೆ.

ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್​.ಮುರಳೀಧರ್​ ಮತ್ತು ಎಸ್​.ಎನ್​. ವಾಣಿಶ್ರೀ ದಂಪತಿಯ ಪುತ್ರಿ ಸ್ಫೂರ್ತಿ ಪ್ರಸ್ತುತ ಬೆಂಗಳೂರಿನ ಬಿಎಂಎಸ್​ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ನೆಹರು ಯುವ ಕೇಂದ್ರ ಸಂಘಟನೆ ಆಯೋಜಿಸಿದ್ದ 2021-22ನೇ ಸಾಲಿನ ಯೂತ್​ ಪಾಲಿರ್ಮೆಂಟ್​ ಸ್ಪರ್ಧೆಯಲ್ಲಿ ವಿಜೇತೆಯಾಗಿರುವ ಸ್ಫೂರ್ತಿ ನ.19ರಂದು ಸಂಸತ್​ ಭವನದ ಸೆಂಟ್ರಲ್​ ಹಾಲ್​ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯಲ್ಲಿ ಭಾಷಣ ಮಾಡಲಿದ್ದಾರೆ. ದೇಶದ ವಿವಿಧ ರಾಜ್ಯಗಳ ಯುವ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಸ್ಫೂರ್ತಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.