ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ತರಗತಿ ಆರಂಭೋತ್ಸವವನ್ನು ಡಾ. ಎ.ಟಿ.ಎ.ಎಸ್.ಗಿರಿ ಉದ್ಘಾಟಿಸಿದರು. ಡಾ. ಟಿ.ಆರ್.ಶ್ರೀಧರ್, ಸಿ.ಎಚ್.ಇಂದುಕುಮಾರ್, ತೇಜ ಇತರರಿದ್ದರು. 
ನ್ಯೂಸ್

ನರ್ಸಿಂಗ್‌ನಲ್ಲಿ ಸಮರ್ಪಣಾ ಭಾವ ಮುಖ್ಯ

ಚಿಕ್ಕಮಗಳೂರು: ನರ್ಸಿಂಗ್ ಸೇವೆಯಲ್ಲಿ ಸಮರ್ಪಣೆ ಮತ್ತು ಪ್ರಾಮಾಣಿಕತೆ ಮುಖ್ಯ. ಸ್ಪರ್ಧಾತ್ಮಕ ಪರಿಸರವು ಶಿಸ್ತು, ಸೃಜನಶೀಲತೆ ಮತ್ತು ಸೂಕ್ಷ್ಮ ಮನೋಭಾವ ಅಪೇಕ್ಷಿಸುತ್ತದೆ ಎಂದು ಗೌತಮ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ಅಧ್ಯಕ್ಷ ಡಾ. ಎ.ಟಿ.ಎ.ಎಸ್.ಗಿರಿ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ವಿದ್ಯಾರ್ಥಿ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ತರಗತಿ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಠ, ಪ್ರವಚನಗಳ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಾದಿಯರು ಪಾಠಗಳನ್ನು ಓದುವ ಜತೆಗೆ ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.
ರೋಗಿಗಳೊಂದಿಗೆ ಸಹನೆಯಿಂದ ವರ್ತಿಸಬೇಕು. ಬಹುತೇಕ ರೋಗಿಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ಅವರ ಪಾಲಕರು ವೈದ್ಯರಿಗಿಂತಲೂ ಹೆಚ್ಚಾಗಿ ದಾದಿಯರನ್ನೇ ಪ್ರಶ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲ ಅವರಿಗೆ ಪರಿಸ್ಥಿತಿಯ ಬಗ್ಗೆ ಸಮಾಧಾನವಾಗಿ ಮನವರಿಕೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರದ ಕೆಆರ್‌ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಟಿ.ಆರ್.ಶ್ರೀಧರ್ ಮಾತನಾಡಿ, ನರ್ಸಿಂಗ್ ಸೇವೆ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು. ಪ್ರತಿ ಉದ್ಯೋಗಕ್ಕೂ ಅದರದ್ದೇ ಆದ ವೈಶಿಷ್ಟೃ ಇರುತ್ತದೆ. ಸೇವೆಯೇ ಪ್ರಾಮುಖ್ಯತೆ ಹೊಂದಿದ ಕ್ಷೇತ್ರ ಇದಾಗಿದೆ. ಕೇವಲ ಹಣದಿಂದಲೇ ಸೇವೆಯನ್ನು ಅಳೆಯಲು ಆಗುವುದಿಲ್ಲ ಎಂದರು.
ಪ್ರತಿ ರೋಗಿಗೆ ಸೇವೆ ಸಲ್ಲಿಸುವಾಗಲೂ ಅವರನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡು ನಿಗಾವಹಿಸಿದಾಗ ಸೇವೆಗೆ ಅರ್ಥ ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ಅಧ್ಯಕ್ಷ ಸಿ.ಎಚ್.ಇಂದುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ತೇಜ ಉಪಸ್ಥಿತರಿದ್ದರು.