ನ್ಯೂಸ್

ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕುಸಿತ : ಸಿಎಂ ಸಿದ್ದರಾಮಯ್ಯ ಕಳವಳ | CM lesson on atrocity investigation

ಮೃತ್ಯುಂಜಯ ಕಪಗಲ್

ಬೆಂಗಳೂರು: ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗುವ ಬದಲು ಇಳಿಮುಖವಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸೆಲ್‌ಗಳಿಗೆ ಪೊಲೀಸ್ ಠಾಣೆ ನೀಡಿದ್ದಾಗಿದೆ. ಆದರೂ ಶಿಕ್ಷೆಯ ಪ್ರಮಾಣ ಕುಸಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದರು.

ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ 2020ರಲ್ಲಿ ಶೇಕಡ 10ರಷ್ಟಿತ್ತು. ಅದೀಗ ಶೇ.7ಕ್ಕೆ ಕುಸಿದಿದೆ. ಇಂತಹ ಪ್ರಕರಣಗಳ ತನಿಖೆಯ ಗುಣಮಟ್ಟ ಸುಧಾರಿಸಬೇಕು, ನ್ಯಾಯಾಲಯಗಳಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್‌ಗಳ ಸರಿಯಾಗಿ ವಾದಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸೂಚಿಸಿದರು.

ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ, ಆರೋಪಿಗಳಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ಎಂಬ ವಿವರ ಕೊಡಿ ಎಂದು ಸಿಟ್ಟಿನಿಂದಲೇ ಅಧಿಕಾರಿಗಳಿಗೆ ಕೇಳಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂದರೆ ಅಧಿಕಾರಿಗಳ ದೌರ್ಬಲ್ಯವೇ ಸರಿ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ. ದೌರ್ಜನ್ಯ ಮಾಡಿದವರು ಸುಲಭವಾಗಿ ಜಾಮೀನು ಪಡೆಯದಂತೆ ಸೂಕ್ತ ಕ್ರಮವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿದೆ ಎಂದರೆ ಕೌಂಟರ್ ಕೇಸ್‌ಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಿದೆಯೆ ? ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ ದಾಸ್ ಪ್ರಶ್ನಿಸಿ, ಅಸಮಾಧಾನ ಹೊರಹಾಕಿದರು.

ಅಲ್ಲದೆ ಮೂರು ವಿಶೇಷ ನ್ಯಾಯಾಲಯಗಳಿಗೆ ಅನುಮತಿ ಸಿಕ್ಕಿದೆ. ಇನ್ನೂ 24 ವಿಶೇಷ ನ್ಯಾಯಾಲಯಗಳಿಗೆ ಅನುಮತಿ ದೊರೆತಿಲ್ಲವೆಂದು ಗಮನಸೆಳೆದರು. ಸಿಎಂ ಸಿದ್ದರಾಮಯ್ಯ ಸ್ಪಂದಿಸಿ, ಬಾಕಿ ನ್ಯಾಯಾಲಯಗಳಿಗೆ ತ್ವರಿತವಾಗಿ ಅನುಮತಿ ಸಿಗುವ ದಿಕ್ಕಿನಲ್ಲಿ ಪ್ರಯತ್ನಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ದೋಷಾರೋಪ ಪಟ್ಟಿಗೆ ಗಡುವು

ಪರಿಶಿಷ್ಟ ಜಾತಿ/ ಪಂಗಡಗಳ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ ತೆರವಿಗೆ ಕ್ರಮಕೈಗೊಳ್ಳಬೇಕು. 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ಇನ್ನೂ 665 ಪ್ರಕರಣಗಳು ತನಿಖೆಗೆ ಬಾಕಿಯಿವೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನ್ಯಾಯಾಲಯಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು.

ಪರಿಶಿಷ್ಟರ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ತಡ ಆದಷ್ಟು ನ್ಯಾಯಾಲಯಗಳಲ್ಲಿ ವಿಚಾರಣೆ ತಡೆ ಆದಷ್ಟು ಸಾಕ್ಷಿ ನಾಶವಾಗುತ್ತದೆ. ಈ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಸಾಕ್ಷಿಯ ಭಾರವಿರುತ್ತದೆ. ಆರೋಪ ಪಟ್ಟಿ ಶೀಘ್ರವಾಗಿ ಸಲ್ಲಿಸಿ ಸಾಕ್ಷ್ಯಗಳನ್ನು ಪರಿಣಾಮಕಾರಿಯಾಗಿ ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದರು.

ಪೋಕ್ಸೋ ಪ್ರಕರಣಗಳು ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿಯಿದ್ದರೆ ಪ್ರಾಸಿಕ್ಯೂಷನ್ ಜತೆ ಚರ್ಚಿಸಿ ಬೇಗ ಇತ್ಯರ್ಥಪಡಿಸಲು, ಶೀಘ್ರ ನ್ಯಾಯದಾನಕ್ಕೆ ಕ್ರಮವಹಿಸುವೆಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದರು.

ಆಹೋರಾತ್ರಿ ಧರಣಿ ಪ್ರಸ್ತಾಪ

ರಾಯಚೂರಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿಯಡಿ ಮಹಿಳೆಯರು ಆಹೋರಾತ್ರಿ ಧರಣಿ ಹೂಡಿದ್ದನ್ನು ಸಭೆಯಲ್ಲಿ ಸಿಎಂ ಪ್ರಸ್ತಾಪಿಸಿದರು. ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು.

ವೈಜ್ಞಾನಿಕವಾಗಿ ದೇವದಾಸಿಯರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಬೇಕು ಎನ್ನುವುದು ಪ್ರತಿಭಟನಾ ನಿರತರ ಬೇಡಿಕೆಗಳಾಗಿವೆ ಎಂದು ಉಲ್ಲೇಖಿಸಿದರು. ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ, ದೇವದಾಸಿ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.