ನ್ಯೂಸ್

ಜಮ್ಮು-ಕಾಶ್ಮೀರದಲ್ಲಿ ಉಗ್ರರ ನೇಮಕಾತಿಯಲ್ಲಿ ಇಳಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಮತ್ತು ಯೋಜನೆಗಳು ಫಲ ನೀಡುತ್ತಿದ್ದು, ಕಳೆದ 7 ವರ್ಷದಲ್ಲಿ ಸ್ಥಳೀಯ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾಗುವ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿದೆ.

ಭಯೋತ್ಪಾದಕ ಸಂಘಟನೆಗಳು ಕಣಿವೆ ರಾಜ್ಯದ ಸ್ಥಳೀಯ ಯುವಕರನ್ನು ಸೆಳೆದು ನೇಮಕಾತಿ ಮಾಡಿಕೊಳ್ಳುತ್ತಿದ್ದವು. ಯುವಕರಿಗೆ ತರಬೇತಿ ನೀಡಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದರು. 2016ರ ಜುಲೈನಲ್ಲಿ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರಿ ಯುವಕರು ಬಂದೂಕು ಹಿಡಿಯುವ ಪ್ರಮಾಣ ಹೆಚ್ಚಿತ್ತು. 2018ರಲ್ಲಿ ಸುಮಾರು 200 ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದರು. ಆದರೆ 2025 ರಲ್ಲಿ ಈ ಪ್ರಮಾಣ ಇಳಿಕೆ ಕಂಡಿದ್ದು ಕೇವಲ ಒಬ್ಬ ಯುವಕ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಕಾಶ್ಮೀರಿ ಯುವಕರನ್ನು ತಮ್ಮ ಸಂಘಟನೆಯತ್ತ ಸೆಳೆಯುತ್ತವೆ. ಮೃತ ಉಗ್ರರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ಸೇರುತ್ತಿದ್ದರು. ಆಗ ಮೃತ ಉಗ್ರನನ್ನು ಹೀರೋ ಎಂದು ಬಿಂಬಿಸಿ ಹತ್ತಾರು ಯುವಕರನ್ನು ತಮ್ಮ ಸಿದ್ಧಾಂತದತ್ತ ಸೆಳೆದುಕೊಳ್ಳುತ್ತಿದ್ದರು. ಆದರೆ 2019ರ ಆಗಸ್ಟ್ 5 ರಂದು ಆರ್ಟಿಕಲ್ 370ಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಗಿತ್ತು. ಆ ಬಳಿಕ ರಾಜ್ಯದ ಆಡಳಿತ ಮತ್ತು ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು ಉಗ್ರರ ನೇಮಕಾತಿ ಕುಸಿಯಲು ಕಾರಣವಾಗಿದೆ.

1050 ಉಗ್ರರ ಹತ್ಯೆ

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳಲ್ಲಿ 2019 ರಿಂದ 2024 ರವರೆಗೆ 1050 ಉಗ್ರರು ಹತ್ಯೆಗೀಡಾಗಿದ್ದಾರೆ. ಈ ಅವಧಿಯಲ್ಲಿ ಹೊಸದಾಗಿ ಉಗ್ರ ಸಂಘಟನೆಗೆ ಸೇರ್ಪಡೆಯಾದವರನ್ನು ಪತ್ತೆ ಹಚ್ಚಿ ಹತ್ಯೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಉಗ್ರರ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸದೆ ಉತ್ತರ ಕಾಶ್ಮೀರದ ಅನಾಮಿಕ ಸ್ಥಳಗಳಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದರಿಂದ ಅವರ ಅಂತ್ಯಕ್ರಿಯೆಯಲ್ಲಿ ಯುವಕರು ಜಮಾವಣೆಯಾಗುವುದು ತಪ್ಪಿದ್ದು, ಹೊಸ ನೇಮಕಾತಿಗೆ ತಡೆ ಬಿದ್ದಿದೆ. ಪ್ರಸ್ತುತ ಉಗ್ರರ ಅಂತ್ಯಕ್ರಿಯೆಯಲ್ಲಿ ಅವರ ಕುಟುಂಬಸ್ಥರು ಮತ್ತು ಕೆಲವೇ ಅಧಿಕಾರಿಗಳು ಮಾತ್ರ ಪಾಲ್ಗೊಳ್ಳತ್ತಿದ್ದು, ಅಂತ್ಯಕ್ರಿಯೆ ಭಾವನಾತ್ಮಕವಾಗಿ ಯುವಕರಿಗೆ ಪ್ರಚೋದನೆ ನೀಡದಂತೆ ತಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳುವಿಕೆಗೂ ಕಡಿವಾಣ

2020 ರಲ್ಲಿ 160 ಸ್ಥಳೀಯ ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರೆ, ಈ ಸಂಖ್ಯೆ 2021ರಲ್ಲಿ 125, 2022ರಲ್ಲಿ 100, 2023ರಲ್ಲಿ 22 ಮತ್ತು 2024ರಲ್ಲಿ 7 ಕುಸಿದಿದೆ. ಈ ವರ್ಷ ಇದುವರೆಗೆ ಒಬ್ಬ ಸ್ಥಳೀಯ ಯುವಕ ಮಾತ್ರ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಬಳಿಕ ಬೇಲಿ, ಗಸ್ತು ಮತ್ತು ಡ್ರೋನ್ ಬಳಕೆ ಹೆಚ್ಚಳದಿಂದ ಗಡಿದಾಟಿ ಭಾರತದೊಳಗೆ ನುಸುಳುತ್ತಿದ್ದ ಉಗ್ರರ ಸಂಖ್ಯೆಗೂ ಕಡಿವಾಣ ಬಿದ್ದಿದೆ.