ಬೆಂಗಳೂರು: ವಿಶ್ವಕ್ಕೆ ಸಮಾನತೆ ಸಾರಿದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಠಾಧೀಶರು ಸನ್ಮಾನಿಸಿ ಅಭಿನಂದಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಬಸವಣ್ಣನವರ ಮೂರ್ತಿ, ವಚನಗಳ ಪುಸ್ತಕ ನೀಡಿ ಗೌರವಿಸಿದರು.
ನಂತರ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರು ಸಿಎಂ ಸಿದ್ದರಾಮಯ್ಯನವರ ಜತೆಗೆ ಮುಂದೆ ಆಗಬಹುದಾದ ಬಸವಣ್ಣನವರ ಕಾರ್ಯಗಳ ಕುರಿತು ಚರ್ಚಿಸಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಬೇಕೆನ್ನುವ ಬಹುದಿನಗಳ ಬೇಡಿಕೆ ಈಡೇರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ತಾವು ಬಸವಣ್ಣವರ ಅನುಯಾಯಿ ಆಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸಿದ್ದೀರಿ. ಬಸವಕಲ್ಯಾಣ ಅನುಭವ ಮಂಟಪ ಕಟ್ಟಡ ನೀಲನಕಾಶೆ ತಮ್ಮ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಇಳಕಲ್‌ನ ಶ್ರೀ ಗುರುಮಹಾಂತ ಮಹಾಸ್ವಾಮಿಗಳು, ನಿಜಗುಣಾನಂದ ಸ್ವಾಮೀಜಿ, ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ, ಕೂಡಲಸಂಗಮದ ಬಸವಯೋಗಿ ಶ್ರೀಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಚಿವ ದಿನೇಶ್ ಗುಂಡೂರಾವ್, ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮತ್ತಿತರರು ಭಾಗವಹಿಸಿದ್ದರು.